ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಜನ್ಮದಿನದ ಅಂಗವಾಗಿ ಶುಕ್ರವಾರ ಪತ್ನಿಯೊಂದಿಗೆ ಗೂಪೂಜೆ ನೆರವೇರಿಸಿ 11 ಹಸುಗಳನ್ನು ಆಜೀವನ ದತ್ತು ಸ್ವೀಕರಿಸಿದರು. 
ನ್ಯೂಸ್

ಜನಾಶೀರ್ವಾದ, ಸಿಎಂ ಮುದ: ಆರು ತಿಂಗಳ ರಿಪೋರ್ಟ್ ಕಾರ್ಡ್ ಮುಂದಿಟ್ಟ ಬೊಮ್ಮಾಯಿ

Webdesk - Ravikanth

ಬೆಂಗಳೂರು: ‘ಸಾಧನೆಗೆ ಕೊನೆ ಇಲ್ಲ. ಗುರಿ ದೊಡ್ಡದಿದೆ. ಹಲವಾರು ಸವಾಲೂ ಮುಂದಿದೆ. ಅದನ್ನು ಎದುರಿಸುವ ಆತ್ಮವಿಶ್ವಾಸ ಕಳೆದ ಆರು ತಿಂಗಳಲ್ಲಿ ನಮ್ಮ ತಂಡಕ್ಕೆ ಬಂದಿದೆ. ಹೀಗಾಗಿ ಬರುವ ದಿನಗಳಲ್ಲಿ ಭದ್ರ ಭವಿಷ್ಯದ ಭರವಸೆಯ ಆಡಳಿತ ನೀಡುತ್ತೇವೆ...’

ವಿಧಾನಸೌಧದ ಬ್ವಾಂಕ್ವೆಟ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಆರು ತಿಂಗಳ ಅವಧಿಯ ರಿಪೋರ್ಟ್ ಕಾರ್ಡ್ ರಾಜ್ಯದ ಜನತೆಯ ಮುಂದಿಡುವ ಜತೆಯಲ್ಲೇ ಇಂಥದ್ದೊಂದು ಸಂಕಲ್ಪ ತೊಟ್ಟರು. ಕಠಿಣ ವಾತಾವರಣದ ನಡುವೆಯೂ ಹೊಸ ಯೋಜನೆಗಳನ್ನು ಜಾರಿ ಮಾಡಿ ಮನೆಮನ ಮುಟ್ಟಿದ್ದೇವೆ, ಹಲವು ಸವಾಲು ಮೆಟ್ಟಿ ನಿಂತಿದ್ದೇವೆ, ದಕ್ಷ ಆಡಳಿತ ಇನ್ನಷ್ಟು ವೇಗದಲ್ಲಿ ಮುಂದುವರಿಯಲಿದೆ, ಅದರ ಫಲ ಜನಾಶೀರ್ವಾದ ರೂಪದಲ್ಲಿ ಸಿಗಲಿದೆ ಎಂದು ಸಿಎಂ ಆಶಯ ವ್ಯಕ್ತಪಡಿಸಿದರು. ಅತ್ಯಂತ ವಿಶ್ವಾಸಭರಿತ ಹಾವ- ಭಾವ, ವಾಗ್ಝರಿಯ ಹೇಳಿಕೆಗಳಿಂದ ಮುಂದಿನ ತಮ್ಮ ಆಡಳಿತ ಅವಧಿಯ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತೆರೆದಿಟ್ಟರು. ಇದು ವೇದಿಕೆಯ ಮೇಲಿದ್ದ ಸಂಪುಟ ಸಹೋದ್ಯೋಗಿಗಳು, ಎದುರು ಆಸೀನರಾಗಿದ್ದ ಇಲಾಖೆ ಮುಖ್ಯಸ್ಥ ಹಿರಿಯ ಅಧಿಕಾರಿಗಳಿಗೂ ತಟ್ಟಿದಂತಿತ್ತು. ‘ನಾವು ತೆಗೆದುಕೊಳ್ಳುವ ಪ್ರತಿ ನಿರ್ಣಯಕ್ಕೂ ಸಾರ್ವತ್ರಿಕ ಹಿತವೇ ಕೇಂದ್ರ ಬಿಂದುವಾಗಿರುತ್ತದೆ. ಕಳೆದ ಆರು ತಿಂಗಳಲ್ಲಿ ಯಾವುದೇ ರೀತಿ ವೈಯಕ್ತಿಕ ಹಿತಾಸಕ್ತಿಗೆ ಅವಕಾಶ ಕೊಟ್ಟಿಲ್ಲ. ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ, ಭಿನ್ನಾಭಿಪ್ರಾಯ ಇರುತ್ತದೆ. ವಿಷಯ ಮಂಥನವಾಗಿ ಕೊನೆಯಲ್ಲಿ ಜನ ಹಿತಕ್ಕಾಗಿಯೇ ನಿರ್ಣಯ ತೆಗೆದುಕೊಂಡಿದ್ದೇವೆ’ ಎಂದು ಮಾರ್ವಿುಕವಾಗಿ ಹೇಳಿದರು.

ಸಾಧನೆಯ ವಿವರಣೆ: ನಮ್ಮ ಸರ್ಕಾರದ ಇನ್ನೊಂದು ಗುಣಲಕ್ಷಣವೆಂದರೆ ಅಂತಃಕರಣ. ಎಂತಹ ಕಷ್ಟ ಬಂದರೂ ಮಾನವೀಯತೆಯ ಗುಣವನ್ನು ಸಚಿವ ಸಂಪುಟ ಮತ್ತು ಸರ್ಕಾರ ಬಿಟ್ಟುಕೊಟ್ಟಿಲ್ಲ. ನಾನು ಮುಖ್ಯಮಂತ್ರಿಯಾಗಿ ಮೊದಲ ಸಂಪುಟ ಸಭೆಯಲ್ಲಿ ಸಾಮಾಜಿಕ ಪಿಂಚಣಿ ಯೋಜನೆ ಫಲಾನುಭವಿಗಳಿಗೆ 200-300 ರೂ. ಹೆಚ್ಚು ಮಾಡಲಾಯಿತು. ಈ ಹಣ ಸಣ್ಣದೆನಿಸುತ್ತದೆ, ಆದರೂ, ಬಡವರಿಗೆ ನೆರವಾಗಿದೆ. 58 ಲಕ್ಷ ವೃದ್ಧರು, ಅಂಗವಿಕಲ ಬಂಧುಗಳಿಗೆ ನೆರವಾಗಿದ್ದೇವೆ. ಇದು ನಾವು ಅವರಿಗೆ ಕೊಟ್ಟಿರುವ ಆಶ್ರಯ, ಊರುಗೋಲು ಎಂದರು. ಸೂಕ್ಷ್ಮತೆಯಿಂದ ಸರ್ಕಾರ ನಡೆಸಬೇಕಾಗುತ್ತದೆ. ರೈತರಿಗೆ ನಾವು ಎಷ್ಟು ಕೊಟ್ಟರೂ ಕಡಿಮೆಯೇ. ರೈತಾಪಿ ಯುವಕರಿಗೆ ವಿದ್ಯೆ ಹಾಗೂ ಉದ್ಯೋಗ ನೀಡಲು ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಲಾಗಿದೆ. ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳಿಗೂ ಈ ಯೋಜನೆ ವಿಸ್ತರಿಸಲಾಗಿದ್ದು, 4.50 ಲಕ್ಷ ಮಕ್ಕಳು ರೈತ ವಿದ್ಯಾನಿಧಿಯ ಲಾಭ ಪಡೆದಿದ್ದಾರೆ. ಕಾರ್ವಿುಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದರು.

ಮಹಿಳೆಯರ ಸಬಲೀಕರಣಕ್ಕಾಗಿ 7500 ಸ್ತ್ರೀಶಕ್ತಿ ಸಂಘಕ್ಕೆ ತಲಾ ಒಂದು ಲಕ್ಷ ರೂ. ನಂತೆ ಒಟ್ಟು 75 ಕೋಟಿ ರೂಗಳ ಧನ ಸಹಾಯ ಒದಗಿಸಲಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲಾಗಿದೆ, ಕಾರ್ವಿುಕರ ಕಲ್ಯಾಣ ಯೋಜನೆಯಡಿ 89 ಸಾವಿರ ಕಟ್ಟಡ ಕಾರ್ವಿುಕರ ಮಕ್ಕಳಿಗೆ 150 ಕೋಟಿ ರೂ ವಿದ್ಯಾರ್ಥಿ ವೇತನ ವರ್ಗಾವಣೆ ಮಾಡಲಾಗಿದೆ. ನಾಗರಿಕ ಸ್ನೇಹಿ ಸೇವೆಗಳ ಯೋಜನೆಗಳಾದ ಗ್ರಾಮ ಒನ್​ಸೇವೆಯಲ್ಲಿ ಮಹತ್ತರ ಕ್ರಾಂತಿಯಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣ ಮಂಜೂರು ಮಾಡಲಾಗಿದೆ. ಮನೆಮನೆಗೆ ಗಂಗೆ ರಾಜ್ಯದಲ್ಲಿ ಕಳೆದ 6 ತಿಂಗಳಲ್ಲಿ 11.27 ಲಕ್ಷ ಮನೆಗಳಿಗೆ ಹೊಸದಾಗಿ ನಲ್ಲಿ ನೀರು ಸಂಪರ್ಕ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.

ಫಲಾನುಭವಿಗಳಲ್ಲ ಪಾಲುದಾರರು: ಜನರನ್ನು ಫಲಾನುಭವಿಗಳನ್ನಾಗಿ ಮಾಡುವುದಲ್ಲ, ಪಾಲುದಾರರನ್ನಾಗಿ ಮಾಡಬೇಕೆನ್ನುವುದು ಸರ್ಕಾರದ ಗುರಿ. ತಲಾವಾರು ಆದಾಯದಲ್ಲಿ ಕರ್ನಾಟಕ 4 ನೇ ಸ್ಥಾನದಲ್ಲಿದ್ದು, ಕೇವಲ ಶೇ.30 ಜನ ಮಾತ್ರ ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ. ಶೇ.70 ಜನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಆರ್ಥಿಕ ಬಲವನ್ನು ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಪರಿಣಾಮಗಳ ಅಧ್ಯಯನ: ಸರ್ಕಾರದ ಯೋಜನೆಗಳ ಪರಿಣಾಮಗಳ ಕುರಿತು ಅಧ್ಯಯನ ಮಾಡಿ ಅದರ ಬಗ್ಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಪುಸ್ತಕವನ್ನು ಹೊರತಂದಿದೆ. ಈ ಅಧ್ಯಯನವನ್ನು ಮುಂದುವರಿಸಿ, ಪ್ರತಿ ವಲಯದಲ್ಲಿ ಅದರ ಪರಿಣಾಮ, ಉತ್ತಮ ಅಂಶಗಳು ಹಾಗೂ ಕೊರತೆಗಳನ್ನು ಕಾಲಕಾಲಕ್ಕೆ ತಿಳಿಸುವಂತೆ ಮುಖ್ಯಮಂತ್ರಿಯವರು ಸಂಸ್ಥೆಯ ನಿರ್ದೇಶಕರಿಗೆ ತಿಳಿಸಿದರು.

ಆರು ತಿಂಗಳಲ್ಲಿ ಹಲವು ಜನಪರ ನಿರ್ಣಯ, ಜನ ಸ್ಪಂದನೆಯ ಕೆಲಸ ಮಾಡಿದ್ದೇವೆ. ಮುಂದೆ ಭವ್ಯ ಭವಿಷ್ಯ ಇರುವ ಕರ್ನಾಟಕ ಕಟ್ಟುವ ಕೆಲಸ ಮಾಡುತ್ತೇವೆ, ನವ ಭಾರತಕ್ಕಾಗಿ ನವ ಕರ್ನಾಟಕ ಎಂಬ ಧ್ಯೇಯ ಇಟ್ಟು ಕೆಲಸ ಮಾಡುತ್ತಿದ್ದೇವೆ. | ಬಸವರಾಜ ಬೊಮ್ಮಾಯಿ ಸಿಎಂ

ಆಕ್ರಮಣಕಾರಿ ಆಟವೂ ಗೊತ್ತು: ಆಡಳಿತ ಫುಟ್​ಬಾಲ್ ಆಟವಿದ್ದಂತೆ ಇರಬೇಕು. ಯಾರೂ ತಮ್ಮ ಹತ್ತಿರ ಹೆಚ್ಚು ಹೊತ್ತು ಚೆಂಡನ್ನು ಇಟ್ಟುಕೊಂಡಿರುವುದಿಲ್ಲ. ಸರಿಯಾದ ಸಮಯಕ್ಕೆ ಬೇರೆ ವ್ಯಕ್ತಿಗೆ ಚೆಂಡನ್ನು ಪಾಸ್ ಮಾಡಬೇಕು, ಚೆಂಡು ಗೋಲ್ ತಲುಪಿಸಬೇಕು. ನಮಗೆ ಪಾಸ್ ಮಾಡುವುದೂ ಗೊತ್ತಿದೆ, ಡಿಫೆನ್ಸ್ ಜತೆಗೆ ಆಕ್ರಮಣಕಾರಿ ಆಟವಾಡಲೂ ಗೊತ್ತಿದೆ. ದೊರೆತಿರುವ ಅವಕಾಶವನ್ನು ಜನರ ಪರವಾಗಿ ಬಳಕೆ ಮಾಡಲಾಗುವುದು ಎಂದು ಬೇರೊಂದು ದಾಟಿಯಲ್ಲಿ ಸಿಎಂ ತಿಳಿಸಿದರು. ಸಶಕ್ತ, ಪ್ರಾಮಾಣಿಕ ಟೀಮ್: ವೇದಿಕೆಯಲ್ಲಿರುವುದು ಟೀಮ್ ಕರ್ನಾಟಕ. ಅತ್ಯಂತ ಸಶಕ್ತ, ದಕ್ಷ, ಪ್ರಾಮಾಣಿಕ, ದೂರದೃಷ್ಟಿಯುಳ್ಳ ಟೀಂ ಅನ್ನು ರಾಜ್ಯದ ಜನರ ಮುಂದೆ ಆರು ತಿಂಗಳ ಸಾಧನೆಯೊಂದಿಗೆ ಪ್ರಸ್ತುತಪಡಿಸುತ್ತಿದ್ದೇನೆ, ನಾನು ಒಬ್ಬ ಈ ತಂಡದ ಸದಸ್ಯ ಎಂದು ತಮ್ಮ ಸಹೋದ್ಯೋಗಿಗಳನ್ನು ಸಿಎಂ ಬೊಮ್ಮಾಯಿ ಪರಿಚಯಿಸಿದ್ದು ವಿಶೇಷವಾಗಿ ಕಾಣಿಸಿತು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಹಕಾರವನ್ನು ಭಾಷಣದಲ್ಲಿ ನೆನಪಿಸಿಕೊಂಡರು.

ಸಿಎಂ ಮಾತಿನ ಮುಖ್ಯಾಂಶ

  • ಆರು ತಿಂಗಳ ಆಡಳಿತ ಉತ್ಸಾಹ ಕೊಟ್ಟಿದೆ. ಜನರಿಂದ ಸಾಕಷ್ಟು ನಿರೀಕ್ಷೆಯೂ ಇದೆ. ಅದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇವೆ.
  • ವಸ್ತುಸ್ಥಿತಿಯನ್ನು ಜನರ ಮುಂದಿಡುವ ಸಂದರ್ಭವಿದು. ಜನರ ಪರವಾಗಿ ಕೆಲಸಮಾಡುವ ಸರ್ಕಾರ ಬಂದಿದೆ ಎಂದು ಜನರು ಹರಸುತ್ತಾರೆ.
  • ನಮ್ಮ ಗುರಿ ದೊಡ್ಡದು. ಇದರೊಂದಿಗೆ ಸವಾಲುಗಳೂ ಇವೆ. ಆದರೆ ಸವಾಲು ಎದುರಿಸುವ ಆತ್ಮಸ್ಥೈರ್ಯವೂ ನಮಗಿದೆ. ಭವಿಷ್ಯದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಾಗಿದೆ.
  • ನಮ್ಮದು ಸ್ಪಂದನಾಶೀಲ, ಸರ್ವವ್ಯಾಪಿ, ಸರ್ವರ್ಸ³ ಸರ್ಕಾರ. ಜನತೆಯ ಹಿತ ಕಾಪಾಡುವುದೇ ನಮ್ಮ ಸರ್ಕಾರದ ಪ್ರಮುಖ ಉದ್ದೇಶ. ಜನ ಕಲ್ಯಾಣವೇ ನಮ್ಮ ಧ್ಯೇಯ.
  • ಸದೃಢ ಕರ್ನಾಟಕ ಕಟ್ಟಲು 24 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ಪ್ರತಿ ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದ ಇಟ್ಟು ಜನರ ವಿಶ್ವಾಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇವೆ.
  • ದುಡಿಯುವ ವರ್ಗದಿಂದಲೇ ಆರ್ಥಿಕತೆಯ ಬೆಳವಣಿಗೆ ಸಾಧ್ಯ. ದುಡಿಮೆಯೇ ದೊಡ್ಡಪ್ಪ ಎಂಬುದು ಸರ್ಕಾರದ ಧ್ಯೇಯ.