ನ್ಯೂಸ್

ನೀಟ್ ರ್ಯಾಂಕ್ ಬಗ್ಗೆ ಸಿಎಂಗೆ ಅನುಮಾನ, ತನಿಖೆಗೆ ಒತ್ತಾಯ

ಬೆಂಗಳೂರು: ಎಂಬಿಬಿಎಸ್ ಪ್ರವೇಶಕ್ಕೆ ನಡೆದ ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡಿರುವ ರ‌್ಯಾಂಕ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಯವರ ಸರ್ಕಾರ ರಚನೆ ಮತ್ತು ಸಂಸದರ ಖರೀದಿಯ ಕಸರತ್ತು ಮುಗಿದಿದ್ದರೆ ನೊಂದ ನೀಟ್ ಪರೀಕ್ಷಾರ್ಥಿಗಳ ಅಹವಾಲು ಆಲಿಸಲಿ ಎಂದು ಮಾತಲ್ಲೇ ಚುಚ್ಚಿದ್ದಾರೆ.
ನೀಟ್ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ ಮೂಡಿರುವ ಆತಂಕಕ್ಕೆ, ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಎನ್‌ಟಿಎ ಆಗಲಿ, ಕೇಂದ್ರ ಸರ್ಕಾರವಾಗಲೀ ಉತ್ತರಿಸದೆ ಲಕ್ಷಾಂತರ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ಪ್ರವೇಶ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳಿಗೆ 720ಕ್ಕೆ 720 ಅಂಕಗಳು ಬಂದಿವೆ. ಅಂದರೆ ಶೇ.100 ಅಂಕಗಳು ಬಂದಿದೆ. ಆದರೆ ಈ ಹಿಂದೆ ಬಂದ ಟಾಪರ್‌ಗಳ ಸಂಖ್ಯೆ ಎಷ್ಟು? ಎಂಬುದನ್ನು ಹೋಲಿಕೆ ಮಾಡಿ ನೋಡಿದರೆ ಈ ಬಾರಿಯ ಫಲಿತಾಂಶದಲ್ಲಿ ಅಕ್ರಮದ ವಾಸನೆ ಬಡಿಯುತ್ತದೆ ಎಂದು ಹೇಳಿದ್ದಾರೆ.
2019ರಲ್ಲಿ ಒಬ್ಬ ವಿದ್ಯಾರ್ಥಿ, 2020ರಲ್ಲಿ ಒಬ್ಬ, 2021ರಲ್ಲಿ ಮೂವರು, 2022ರಲ್ಲಿ ಒಬ್ಬ, 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಪ್ರತಿಶತ ಅಂಕ ಪಡೆದಿದ್ದರೆ ಈ ವರ್ಷ 67 ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿರುವ ಕಾರಣ ಇಷ್ಟೊಂದು ಮಂದಿ ನೂರು ಪ್ರತಿಶತ ಅಂಕ ಗಳಿಸುವುದು ಅಸಾಧ್ಯ ಎನ್ನಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಇದು ಕಾಕತಾಳೀಯವೋ ಅಥವಾ ಹೊಸ ಪ್ರಯೋಗವೋ? ಇದನ್ನು ಮೋದಿ ಸರ್ಕಾರವೇ ಸ್ಪಷ್ಟಪಡಿಸಬೇಕು. ನೀಟ್‌ನ 67 ಟಾಪರ್‌ಗಳಲ್ಲಿ 44 ಮಂದಿ ’ಗ್ರೇಸ್‌ಮಾರ್ಕ್’ ಆಧಾರದ ಮೇಲೆ ಟಾಪರ್‌ಗಳಾಗಿದ್ದಾರೆ. ಗ್ರೇಸ್ ಅಂಕಗಳ ಆಧಾರದ ಮೇಲೆ ಇಷ್ಟೊಂದು ಪರೀಕ್ಷಾರ್ಥಿಗಳು ಟಾಪರ್‌ಗಳಾದಾಗ, ಮಾರ್ಕಿಂಗ್ ಪ್ರಕ್ರಿಯೆ ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸಿಂಧುತ್ವದ ಮೇಲೆ ಪ್ರಶ್ನೆ ಹುಟ್ಟುಹಾಕುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದು ಅಚ್ಚರಿಯ ವಿಷಯವೇನೆಂದರೆ 62 ರಿಂದ 69 ರವರೆಗಿನ ಸರಣಿ ಸಂಖ್ಯೆಗಳೊಂದಿಗೆ ನೀಟ್ ಟಾಪರ್‌ಗಳು ಹರಿಯಾಣದ ಫರಿದಾಬಾದ್‌ನಲ್ಲಿರುವ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರು. ಈ ಪೈಕಿ 6 ಜನರು 720/720 ಅಂಕಗಳೊಂದಿಗೆ ನೀಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು 718 ಮತ್ತು 719 ಅಂಕಗಳನ್ನು 2 ಮಂದಿ ಪಡೆದಿದ್ದಾರೆ. ಮೇಲ್ನೋಟಕ್ಕೆ ಪರೀಕ್ಷಾ ಅಕ್ರಮ ನಡೆದಿರುವುದು ಕಂಡುಬಂದರೂ ಎನ್‌ಟಿಎ ಮತ್ತು ಸರ್ಕಾರ ಈ ಫಲಿತಾಂಶವನ್ನು ಸಮರ್ಥಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದ್ದಾರೆ.
ಎನ್‌ಟಿಎ ಪ್ರಾಸ್ಪೆಕ್ಟಸ್, ನೀಟ್ ಬ್ರೋಷರ್ ಮತ್ತು ಸರ್ಕಾರಿ ಸೂಚನೆಗಳಲ್ಲಿ ಈ ರೀತಿಯಲ್ಲಿ ಗ್ರೇಸ್ ಅಂಕಗಳನ್ನು ನೀಡುವ ಅವಕಾಶ ಇರುವ ಕುರಿತು ಯಾವುದೇ ಮಾಹಿತಿ ಇಲ್ಲ. ಹಾಗಾದರೆ ಈ ಗ್ರೇಸ್ ಮಾರ್ಕ್‌ಗಳನ್ನು ಯಾವ ಆಧಾರದ ಮೇಲೆ ನೀಡಲಾಗಿದೆ? ಈ ಬಗ್ಗೆ ಮೋದಿ ಸರ್ಕಾರದಿಂದ ಸಾರ್ವಜನಿಕ ಸೂಚನೆ ಅಥವಾ ಜಾಹೀರಾತು ನೀಡಲಾಗಿದೆಯೇ? ಬೇರೆ ಯಾವುದಾದರೂ ಕೇಂದ್ರದಲ್ಲಿ ಇದೇ ರೀತಿ ಗ್ರೇಸ್ ಮಾರ್ಕ್ಸ್‌ ನೀಡಲಾಗಿದೆಯೇ? ಎಂಬಿತ್ಯಾದಿ ಮಾಹಿತಿಯನ್ನು ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.