contractors meeting with CM 
ನ್ಯೂಸ್

ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆಗೆ ಸಿಎಂ ಡಿಕೆಶಿ ಒಪ್ಪಿಗೆ: ಸಮಸ್ಯೆ ಬಗೆಹರಿಸಲು ಅತೀಕ್, ತುಷಾರ್ ಗಿರಿನಾಥ್‌ಗೆ ಜವಾಬ್ದಾರಿ - CM DK Shivakumar agree to release funds for pending bills

ನವೆಂಬರ್‌ದೊಳಗೆ ಹಣ ಬಿಡಗಡೆ ಮಾಡದಿದ್ದರೆ ಡಿಸೆಂಬರ್‌ನಲ್ಲಿ ಲಂಚ ಪಡೆದಿರುವ ಶಾಸಕರ ಹೆಸರು ಬಹಿರಂಗಪಡಿಸುವುದಾಗಿ ಈ ಹಿಂದೆ ಗುತ್ತಿಗೆದಾರರು, ಸರ್ಕಾರ ಎಚ್ಚರಿಕೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಕರೆದ ಸಭೆಯಲ್ಲಿ ಇಲಾಖೆಗಳ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಿಎಂ ಡಿಕೆಶಿ ಗುತ್ತಿಗೆದಾರರ ಅಹವಾಲು ಆಲಿಸಿದರು.

ಬೆಂಗಳೂರು: (CM DK Shivakumar agree to release funds for pending bills) ಕಾಮಗಾರಿಗಳನ್ನು ನಿರ್ವಹಿಸಿರುವ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆಗೆ ಸಾಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಆರ್ಥಿಕ ಇಲಾಖೆ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಹಣಕಾಸು ಕಾರ್ಯದರ್ಶಿ ತುಷಾರ್ ಗಿರಿನಾಥ್‌ಗೆ ಜವಾಬ್ದಾರಿ ಕೊಟ್ಟಿದ್ದಾರೆ.

ನವೆಂಬರ್‌ದೊಳಗೆ ಹಣ ಬಿಡಗಡೆ ಮಾಡದಿದ್ದರೆ ಡಿಸೆಂಬರ್‌ನಲ್ಲಿ ಲಂಚ ಪಡೆದಿರುವ ಶಾಸಕರ ಹೆಸರು ಬಹಿರಂಗಪಡಿಸುವುದಾಗಿ ಈ ಹಿಂದೆ ಗುತ್ತಿಗೆದಾರರು, ಸರ್ಕಾರ ಎಚ್ಚರಿಕೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಕರೆದ ಸಭೆಯಲ್ಲಿ ಇಲಾಖೆಗಳ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಿಎಂ ಡಿಕೆಶಿ ಗುತ್ತಿಗೆದಾರರ ಅಹವಾಲು ಆಲಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದಕುಮಾರ್, ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಅಂದಾಜು 38 ಸಾವಿರ ಕೋಟಿ ರೂ. ಬಾಕಿ ಹಣ ಪಾವತಿಯಾಗಬೇಕಿದ್ದು, ಈ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡಬೇಕು. ಬಾಕಿ ಹಣ ಪಾವತಿಸುವವರೆಗೆ ಹೊಸ ಕಾಮಗಾರಿಗಳಿಗೆ ಟೆಂಡರ್ ಕರೆಯಬಾರದು, ಮತ್ತು ಪ್ಯಾಕೇಜ್ ಪದ್ಧತಿ ರದ್ದು ಪಡಿಸಬೇಕು ಎಂದು ಸಿಎಂ ಗಮನಕ್ಕೆ ತಂದರು. ಅಲ್ಲದೆ, ರಾಜ್ಯದಲ್ಲಿ ಅಂದಾಜು 1.50 ಲಕ್ಷ ಗುತ್ತಿಗೆದಾರರು ಇದ್ದಾರೆ. 2021-22ರಿಂದ ಈವರೆಗೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಲೋಕೋಪಯೋಗಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರತುಪಡಿಸಿ ಇತರ ಇಲಾಖೆಗಳಲ್ಲಿ ಟೆಂಡರ್ ಮತ್ತು ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ. ಸರ್ಕಾರದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಗುತ್ತಿಗೆದಾರರ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ಸಿಎಂಗೆ ಮನವಿ ಮಾಡಿದರು.

ಆರ್. ಮಂಜುನಾಥ್ ಮಾತನಾಡಿ, ಅನುದಾನವಿಲ್ಲದ ಕಾಮಗಾರಿಗಳಿಗೆ ಟೆಂಡರ್ ಕರೆಯುವುದನ್ನು ನಿಲ್ಲಿಸಬೇಕು. ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಹಣ ಪಾವತಿಸಿದ ನಂತರವೇ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಇಲಾಖಾವಾರು ಗುತ್ತಿಗೆದಾರರ ಜ್ಯೇಷ್ಠತೆಯನ್ನು ಪರಿಗಣಿಸಿ ಬಾಕಿ ಹಣ ಬಿಡುಗಡೆ ಮಾಡಬೇಕು. ವಿಶೇಷ ಎಲ್‌ಒಸಿ ನೀಡುವುದನ್ನು ತಡೆಹಿಡಿಯಬೇಕು. ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್ ರೂಪದಲ್ಲಿ ಟೆಂಡರ್ ಕರೆಯುವ ಪದ್ಧತಿಯಿಂದ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಶಾಸಕರ ಹಸ್ತಕ್ಷೇಪ ನಿಲ್ಲಿಸಬೇಕು. ಜಿಲ್ಲಾ, ತಾಲೂಕು ಮಟ್ಟದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.

ಸಂಘದ ಗೌರವ ಅಧ್ಯಕ್ಷ, ಕಾರ್ಯಾಧ್ಯಕ್ಷರು, ಉಪಾಧ್ಯಕ್ಷರಗಳು, ಸಂಘಟನಾ ಕಾರ್ಯದರ್ಶಿ ಸೇರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರ್ಕ್‌ಡನ್, ಟರ್ನ್‌ಓವರ್ ಪ್ರಮಾಣಪತ್ರ ಮಾನ್ಯತೆ ವಿಸ್ತರಿಸಿ

ವರ್ಕ್‌ಡನ್, ಟರ್ನ್‌ಓವರ್ ಪ್ರಮಾಣಪತ್ರ ಮಾನ್ಯತೆಯನ್ನು 10 ವರ್ಷಗಳಿಗೆ ವಿಸ್ತರಿಸಬೇಕು. 2017-18 ಮತ್ತು 2018-19ನೇ ಸಾಲಿನ ಜಿಎಸ್‌ಟಿ ವ್ಯತ್ಯಾಸದ ಶೇ.8 ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಶಿಫಾರಸು ಮಾಡಬೇಕು. ಇ-ಸಂಗ್ರಹಣಾ ವೇದಿಕೆಯ ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್ ಮಾಡ್ಯೂಲ್‌ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡಬೇಕೆಂಬ ಆದೇಶವನ್ನು ರದ್ದುಗೊಳಿಸುವುದು ಸೇರಿ ಗುತ್ತಿಗೆದಾರರು ಎದುರಿಸುತ್ತಿರುವ 10 ಸಮಸ್ಯೆಗಳ ಮನವಿ ಪತ್ರವನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲಿಸಿದ್ದೇವೆ. ಹಾಗಾಗಿ, ಮುಂದಿನ ದಿನಗಳಲ್ಲಿ ನಮ್ಮ ಸಮಸ್ಯೆಗಳು ಬಗೆಹರಿಸುವ ವಿಶ್ವಾಸ ನಮಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದಕುಮಾರ್ ಹೇಳಿದರು.