ಬೆಂಗಳೂರು: ಮುಡಾ ಹಗರಣ, ಮಹರ್ಷಿ ವಾಲ್ಮೀಕಿ ನಿಗಮ ಹಗರಣಗಳ ಕುರಿತು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ವಾಗ್ದಾಳಿ ನಡೆಸುತ್ತಿರುವ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ದೆಹಲಿಗೆ ತೆರಳಿದ್ದಾರೆ.
ಇಂದು ಬೆಳಗ್ಗೆ ದೆಹಲಿಗೆ ತೆರಳಿದ ಡಿಕೆಶಿ ಮತ್ತು ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಹಿರಿಯ ನಾಯಕರಾದ ವೇಣುಗೋಪಾಲ್, ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ಸಮಗ್ರ ವರದಿ ಒಪ್ಪಿಸಿದ್ದಾರೆ.
ಹೈಕಮಾಂಡ್ ನಾಯಕರಿಗೆ ವಾಲ್ಮೀಕಿ ಹಗರಣದ ಬಗ್ಗೆ ವರದಿ ನೀಡಿದ ಸಿಎಂ, ಡಿಸಿಎಂ, ವಾಲ್ಮೀಕಿ ನಿಗಮದ ಹಗರಣ ಅಧಿಕಾರಿಗಳಿಂದ ಆಗಿದೆ. ಸಚಿವರಾಗಿದ್ದ ಬಿ.ನಾಗೇಂದ್ರರ ತಪ್ಪಿಲ್ಲ, ಎಸ್ಐಟಿ ತನಿಖೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ಆಸ್ತಿ ಮೇಲೆ ದಾಳಿಯಾಗಿದೆ. ಪ್ರಕರಣದಲ್ಲಿ ಹಲವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಯುತ್ತಿದೆ. ಇನ್ನು ವರ್ಗಾವಣೆಯಾಗಿದ್ದ ಹಣ ವಶಪಡಿಸಿಕೊಳ್ಳುತ್ತಿದ್ದೇವೆ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಲಾಭ ಪಡೆದುಕೊಳ್ಳುತ್ತಿದೆ ಎಂದು ವಿವರಿಸಿದರು.
ಮುಡಾ ಬಗ್ಗೆ ವಿವರಣೆ ನೀಡಿದ ಸಿದ್ದರಾಮಯ್ಯ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರಿಗೆ ಸ್ಪಷ್ಟ ಮಾಹಿತಿ ಕೊಟ್ಟಿದ್ದಾರೆ. ಸೈಟು ಹಂಚಿಕೆ ವಿಚಾರವಾಗಿ ಯಾವುದೇ ಅಕ್ರಮ ನಡೆದಿಲ್ಲ, ಈಗಾಗಲೇ ಹಲವು ಈ ಬಾರಿ ನಾನು ಸ್ಪಷ್ಟನೆ ನೀಡಿದ್ದೇನೆ, 50:50 ಹಂಚಿಕೆ ನನ್ನ ಕುಟುಂಬಕ್ಕೆ ವಿಶೇಷವಾಗಿ ಮಾಡಿಲ್ಲ, ಮೇಲಾಗಿ ನಾನು ಅಧಿಕಾರದಲ್ಲಿದ್ದಾಗ ಸೈಟು ಹಂಚಿಕೆ ಆಗಿಲ್ಲ, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸೈಟ್ ಕೊಟ್ಟಿರುವುದು, ರಾಜಕೀಯ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವರಿಷ್ಠರ ನಾಯಕರ ಮುಂದೆ ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರ ಜೊತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪರಾಮರ್ಶೆ ನಡೆಸಿದರು. ಸೋಲಿಗೆ ಕಾರಣ ಹುಡುಕಲು ಹೈಕಮಾಂಡ್, ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ರಚಿಸಿತ್ತು. ಇಂದಿನ ಸಭೆಯಲ್ಲಿ ಮಧುಸೂದನ್ ಮಿಸ್ತ್ರಿ ವರದಿ ಮುಂದಿಟ್ಟುಕೊಂಡು ಚರ್ಚೆ ಮಾಡಿದ್ದಾರೆ.
ಪ್ರಧಾನಿ ಮೋದಿ ಜೊತೆ ಡಿಕೆಶಿ ಪ್ರತ್ಯೇಕ ಭೇಟಿ: ಹೈಕಮಾಂಡ್ ಭೇಟಿ ಮಾಡಲು ದೆಹಲಿಯಲ್ಲಿರುವ ಡಿಕೆಶಿ ನಾಳೆ (ಜುಲೈ 31) ರಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೊದಲಿನಿಂದಲೂ ಪ್ರತ್ಯೇಕ ಭೇಟಿಗೆ ಡಿಕೆಶಿ ಅವಕಾಶ ಕೇಳುತ್ತಿದ್ದರು ಎನ್ನಲಾಗಿದೆ. ಈಗ ಪಿಎಂ ಕಚೇರಿ ಡಿಕೆಶಿ ಭೇಟಿಗೆ ಅನುಮತಿ ನೀಡಿದೆ. ಮೋದಿ ಜೊತೆಗಿನ ಈ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.