ಬೆಂಗಳೂರು: ಕಾವೇರಿ ಜಲ ವಿವಾದದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ದ್ವಂದ್ವ ನಿಲುವು ತಳೆದಿದ್ದಾರೆ. ಕಾನೂನಾತ್ಮಕ ಹೋರಾಟದ ಕಾರ್ಯತಂತ್ರದಲ್ಲೂ ಸ್ಪಷ್ಟತೆಯಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟೀಕಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಸಮಿತಿ ಕೆಲ ದಿನಗಳ ಹಿಂದೆ ತಮಿಳುನಾಡಿಗೆ 18 ದಿನಗಳ ಕಾಲ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಆದೇಶಿಸಿತು. ಇದನ್ನು ಕರ್ನಾಟಕಕ್ಕೆ ಸಿಕ್ಕ ಜಯ, ಸ್ವಾಗತಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿ ಅಚ್ಚರಿಗೊಳಿಸಿದರು.
ಆದರೆ ಅದೇ ದಿನ ಸಿದ್ದರಾಮಯ್ಯ ಈ ಆದೇಶದಿಂದ ರಾಜ್ಯಕ್ಕೆ ಸಮಸ್ಯೆಯಾಗಲಿದೆ. ಆಕ್ಷೇಪಣಾ ಅರ್ಜಿ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಗಂಭೀರವಾದ ವಿಷಯದಲ್ಲಿ ಸಿಎಂ, ಡಿಸಿಎಂ ನಡುವೆಯೇ ತಾಳಮೇಳವಿಲ್ಲ. ನಿರ್ವಹಣಾ ಸಮಿತಿ, ಪ್ರಾಧಿಕಾರದ ಮುಂದೆ ನಮ್ಮಲ್ಲಿ ನೀರಿಲ್ಲ, ಕುಡಿಯುವ ನೀರಿಗೂ ತತ್ವಾರವಾಗಲಿದೆ ಎಂದು ವಾದ ಮಂಡಿಸುತ್ತಿರುವ ನಮ್ಮ ವಕೀಲರ ಮನೋಬಲ ಕುಗ್ಗಿಸಲಿದೆ ಎಂದು ತೇಜಸ್ವಿಸೂರ್ಯ ಆತಂಕ ವ್ಯಕ್ತಪಡಿಸಿದರು.
ಮಾತೆತ್ತಿದರೆ ರಾಜ್ಯದ 25 ಸಂಸದರು ಏನೂ ಮಾಡುತ್ತಿಲ್ಲ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ. ಸಿಎಂ, ಡಿಸಿಎಂ ಕೂಡ ಇದೇ ಮಾತಿಗೆ ಧ್ವನಿ ಸೇರಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ ಸೇರಿ ಎಲ್ಲ ಸಂಸದರು ರಾಜ್ಯ ಸರ್ಕಾರದ ಪರವಾಗಿ ಎಂದು ದೆಹಲಿಯಲ್ಲಿ ಇತ್ತೀಚೆಗೆ ಕರೆದ ಸರ್ವಪಕ್ಷ ಸಂಸದರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿರುವುದು ದಾಖಲಾಗಿದೆ.
ಪ್ರಲ್ಹಾದಜೋಶಿ ನೇತೃತ್ವದಲ್ಲಿ ಸಿಎಂ, ಡಿಸಿಎಂ ಒಳಗೊಂಡು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಕರ್ನಾಟಕದ ಜಲ ಸಂಕಷ್ಟ ಮನವರಿಕೆ ಮಾಡಿಕೊಟ್ಟಿದ್ದೇವೆ ಇದೆಲ್ಲ ಆಗಿಲ್ಲವೆಂದು ಸಿಎಂ, ಡಿಸಿಎಂ ಹೇಳಲಿ ನೋಡೋಣವೆಂದು ತೇಜಸ್ವಿಸೂರ್ಯ ಸವಾಲು ಹಾಕಿದರು.
ಸಿಡಬ್ಲ್ಯುಎಂಎ 24 25 ನೇ ಸಭೆಗಳ ನಡವಳಿಗಳಲ್ಲಿ ಏನೇನಿದೆ ಎಂಬುದು ಸಿಎಂ, ಡಿಸಿಎಂ ಗೆ ಗೊತ್ತಿದೆ. ಈ ಸಭೆಯ ನಡವಳಿಗಳನ್ನು ಬಹಿರಂಗ ಮಾಡಬಾರದು ಎಂಬ ಕಾರಣಕ್ಕೆ ಮಾಧ್ಯಮಗೋಷ್ಠಿಯಲ್ಲಿ ಮಂಡಿಸುತ್ತಿಲ್ಲ. ಈ ಎರಡು ಸಭೆಗಳಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳಾದ ಜಲ ಸಂಪನ್ಮೂಲ, ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರ ಸಲ್ಲಿಸಿದ ವರದಿ ವಸ್ತುನಿಷ್ಠವಾಗಿದೆ. ಕರ್ನಾಟಕದ ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿಯುತ್ತಿದೆ ಎಂದು ಧ್ವನಿ ಎತ್ತಿದ್ದಾರೆ. ಸುಳ್ಳು ಹೇಳುತ್ತಿರುವುದಕ್ಕೆ ಸಾಕಷ್ಟು ದಾಖಲೆ, ಪುರಾವೆಗಳಿವೆ ಎಂದು ತೇಜಸ್ವಿಸೂರ್ಯ ಸೆಡ್ಡು ಹೊಡೆದರು.
ರಾಜ್ಯದ 25 ಸಂಸದರು ಒಟ್ಟಾಗಿ ಕರ್ನಾಟಕದ ಹಿತಾಸಕ್ತಿ ಕಾಪಾಡಲು ಕಟಿಬದ್ಧರಾಗಿದ್ದೇವೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಹಿತಾಸಕ್ತಿ ರಕ್ಷಣೆ ವಿಷಯದಲ್ಲಿ ವಿಶೇಷ ಮುತುವರ್ಜಿವಹಿಸಿರುವುದಕ್ಕೆ 2018 ರ ವಿದ್ಯಮಾಮನವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ನೆನಪಿಸಬಯಸುವೆ. ಈ ವಿಷಯದಲ್ಲಿ ಅಂದಿನ ಕೇಂದ್ರ ಸಚಿವ ಅನಂತಕುಮಾರ ಪರಿಶ್ರಮ ಅನನ್ಯವಾದುದು.
ಕಾವೇರಿ ನೀರು ಹಂಚಿಕೆ ಮಾಡಿ ನ್ಯಾಯಾಧಿಕರಣ ನೀಡಿದ ತೀರ್ಪು ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಜೆಯಾಗಿತ್ತು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಸಿಕ್ಕಿಲ್ಲ, ಅನ್ಯಾಯವಾಗಿದೆ ಎಂಬ ಧ್ವನಿಗೆ ಮೋದಿ ನೇತೃತ್ವ ಸರ್ಕಾರ ಬೆಂಬಲಿಸಿತು. ಅಷ್ಟೇ ಅಲ್ಲ, ನೀರು ಹಂಚಿಕೆಯನ್ನು ಪರಿಷ್ಕರಿಸಲು ಕೋರಿ ಅಫಿಡವಿಟ್ ಸಲ್ಲಿಸಿತು. ಇದರಿಂದಾಗಿ ತಮಿಳುನಾಡಿನಿಂದ 14.75 ಟಿಎಂಸಿ ಅಡಿ ನೀರನ್ನು ಪಡೆದು ಕರ್ನಾಟಕಕ್ಕೆ ಹಂಚಿಕೆಯಾಯಿತು. ಸುಪ್ರೀಂ ಕೋರ್ಟ್ ಈ ಕುರಿತು ಪರಿಷ್ಜೃತ ಆದೇಶವನ್ನು ಪ್ರಕಟಿಸಿತು ಎಂದು ತೇಜಸ್ವಿ ಸೂರ್ಯ ಸಮರ್ಥಿಸಿಕೊಂಡರು.
ಕಾವೇರಿ ಜಲ ಬಿಕ್ಕಟ್ಟಿಗೆ ಮೇಕೆದಾಟು ಯೋಜನೆ ಶಾಶ್ವತ ಪರಿಹಾರವಾಗಿದೆ. ಪ್ರಾಧಿಕಾರ, ಸಮಿತಿಯಲ್ಲಿ ಈ ಕುರಿತ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡುವ ಲಕ್ಷಣಗಳಿವೆ. ಸುಪ್ರೀಂ ಕೋರ್ಟ್ ಸಹಿತ ಈ ಪ್ರಕರಣವನ್ನು ಮುಂದಿನ ಎರಡು ವಾರದೊಳಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಅಷ್ಟರೊಳಗೆ ತಕರಾರು ಅರ್ಜಿ ಸಲ್ಲಿಸಿರುವ ತಮಿಳುನಾಡು ಮನವೊಲಿಸಿ ನಿರಾಕ್ಷೇಪಣಾ ಪತ್ರ ಸಲ್ಲಿಸುವಂತಾಗಬೇಕು. ಜಾಂಗ್ರೆಸ್ ಹಾಗೂ ಡಿಎಂಕೆ ಮಿತ್ರಪಕ್ಷಗಳಾಗಿವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನಸ್ಸು ಮಾಡಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಒಪ್ಪಿಸಿದರೆ ಇಬ್ಬರ ಹೆಸರು ಚಿರಸ್ಥಾಯಿಯಾಗಿರಲಿದೆ ಎಂದು ತೇಜಸ್ವಿಸೂರ್ಯ ಹೇಳಿದರು.