ಬೆಂಗಳೂರು: ಆಧುನಿಕ ತಂತ್ರಜ್ಞಾನ ಬಳಸಿ ಸೃಜಿಸಿದ ಡಿಜಿಟಲ್ ವೇದಿಕೆ (ಡ್ಯಾಷ್ಬೋರ್ಡ್)ಯಲ್ಲಿ ಆರು ಇಲಾಖೆಗಳ ಪ್ರಗತಿ ಪರಿಶೀಲಿಸಿದ ಬಸವರಾಜ ಬೊಮ್ಮಾಯಿ, ಕುಳಿತಲ್ಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಧಾನಿ ಕಚೇರಿ ಮಾದರಿಯಲ್ಲಿ ಮುಖ್ಯಮಂತ್ರಿಗೆ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿ ನೀಡುವ ಸಿಎಂ ಡ್ಯಾಷ್ ಬೋರ್ಡ್ಗೆ ಬೊಮ್ಮಾಯಿ ಮಂಗಳವಾರ ಚಾಲನೆ ನೀಡಿದರು. ಜತೆಗೆ ಕಂದಾಯ, ಇಂಧನ, ಶಿಕ್ಷಣ, ವಸತಿ, ಗ್ರಾಮೀಣಾಭಿವೃದ್ಧಿ ಮತ್ತು ಬಿಬಿಎಂಪಿ ವಿವಿಧ ಯೋಜನೆಗಳ ಸ್ಥಿತಿಗತಿ, ಅನುಷ್ಠಾನದ ಪ್ರಗತಿಯನ್ನು ಆನ್ಲೈನ್ನಲ್ಲಿ ಪರಾಮರ್ಶಿಸಿದರು. ಇದೊಂದು ಉತ್ತಮ ಆರಂಭ. ಈ ಡ್ಯಾಷ್ ಬೋರ್ಡ್ ಇಲಾಖೆಗಳ ಕಾರ್ಯನಿರ್ವಹಣೆ ಕುರಿತು ನಿಮಗೂ ಕನ್ನಡಿ ಹಿಡಿಯುತ್ತಿದೆ. ಎಲ್ಲರೂ ಜತೆಯಾಗಿ ನಮ್ಮ ಜವಾಬ್ದಾರಿ ನಿರ್ವಹಿಸೋಣ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜನರಲ್ಲಿ ವಿಶ್ವಾಸ: ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಜನರಿಗೆ ಈ ವ್ಯವಸ್ಥೆ ನಮ್ಮದು. ನಮಗಾಗಿ ಸ್ಪಂದಿಸುವವರು ಇದ್ದಾರೆ ಎಂಬ ವಿಶ್ವಾಸದ ಭಾವನೆ ಬರುವುದು. ಈ ಭಾವನೆ ಮೂಡಿಸಲು ಒಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಬೊಮ್ಮಾಯಿ ಹಿತ ನುಡಿದರು. ಆಯವ್ಯಯದಲ್ಲಿ ನಿಗದಿಪಡಿಸಿದ ಗುರಿ ಸಕಾಲದಲ್ಲಿ ತಲುಪುವ ಪ್ರಯತ್ನ ಮಾಡಬೇಕು. ದಸರಾ ನಂತರ ಮತ್ತೊಂದು ಸಭೆ ನಡೆಸಿ, ಪ್ರಗತಿ ಪರಿಶೀಲಿಸುವೆ ಎಂದು ತಿಳಿಸಿದರು. ನೋಡಲ್ ಅಧಿಕಾರಿಗಳು ಹಾಗೂ ಸರ್ಕಾರದ ಹಂತದಲ್ಲಿ ಇಲಾಖಾ ಮುಖ್ಯಸ್ಥರು ಈ ಮಾಹಿತಿ ಕುರಿತು ವಿಶೇಷ ಕಾಳಜಿವಹಿಸಬೇಕು. ಕಾರ್ಯಕ್ರಮ ರೂಪಿಸುವಷ್ಟೇ ಪ್ರಾಮುಖ್ಯತೆಯನ್ನು ಅನುಷ್ಠಾನಕ್ಕೂ ನೀಡಬೇಕು ಎಂದರು.
ಗೊಂದಲ ಬೇಡ: ವಿವಿಧ ಇಲಾಖೆಗಳ ಪ್ರಮುಖ ಕಾರ್ಯಕ್ರಮಗಳ ಕುರಿತು ಪ್ರತಿದಿನದ ಮಾಹಿತಿಯನ್ನು ಡ್ಯಾಷ್ ಬೋರ್ಡ್ನಲ್ಲಿ ದಾಖಲಿಸಬೇಕು. ಸ್ಪಷ್ಟ, ನಿಖರ ಮಾಹಿತಿ ದಾಖಲಾಗಬೇಕು. ಈ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು ಎಂದು ತಿಳಿಹೇಳಿದರು. ಯೋಜನೆಗಳು ಮತ್ತು ಕಾರ್ಯಕ್ರಮಗಳ ಜಾರಿ ವಿಷಯದಲ್ಲಿ ಹಿರಿಯ ಅಧಿಕಾರಿಗಳು ಆಸಕ್ತಿವಹಿಸದಿದ್ದರೆ ತಳಹಂತದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಕಾರ್ಯಕ್ರಮದ ಫಲಾನುಭವಿಗೆ ಸೌಲಭ್ಯ ತಲುಪಿಸುವವರೆಗೂ ಇಲಾಖಾ ಮುಖ್ಯಸ್ಥರು ಖಾತರಿಪಡಿಸಬೇಕು ಎಂದು ಸಿಎಂ ಬೊಮ್ಮಾಯಿ ಸೂಚಿಸಿದರು.
ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಚೀನಾ ಸೇರಿ ಇತರೆ ರಾಷ್ಟ್ರಗಳಿಗೆ ತಾಂತ್ರಿಕ ನೈಪುಣ್ಯತೆಯಲ್ಲಿ ಸವಾಲೊಡ್ಡಲು ಪ್ರೌಢಶಾಲಾ ಹಂತದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಬಿಯಾಂಡ್ ಬೆಂಗಳೂರು ‘ಇನ್ನೋವೇಷನ್ ಆಂಡ್ ಇಂಪ್ಯಾಕ್ಟ್ ಹುಬ್ಬಳ್ಳಿ’ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಬೆಂಗಳೂರಿನಿಂದಲೇ ಉದ್ಘಾಟಿಸಿ ಮಾತನಾಡಿದ ಅವರು, ಹುಬ್ಬಳ್ಳಿ ನಗರದಲ್ಲಿ 1960ರಲ್ಲಿ ಪ್ರೌಢಶಾಲಾ ಹಂತದ ಮಕ್ಕಳಿಗೆ ತಾಂತ್ರಿಕ ಶಿಕ್ಷಣದಲ್ಲಿ ತರಬೇತಿ ನೀಡಲು ಶಾಲೆಯೊಂದನ್ನು ತೆರೆಯಲಾಗಿತ್ತು. ಆದರೆ ಮೂಲ ಆಶಯ ಈಡೇರಿಸುವಲ್ಲಿ ವಿಫಲವಾದ ಶಾಲೆ ಇತರೆ ಪ್ರೌಢ ಶಾಲೆ ಗಳಂತಾಯಿತು. ಮಕ್ಕಳಲ್ಲಿ ಗ್ರಹಣಶಕ್ತಿ ಉತ್ತಮವಾಗಿದ್ದು ತಾಂತ್ರಿಕ ಶಿಕ್ಷಣದ ತರಬೇತಿ ನೀಡಬಹುದಾಗಿದೆ ಎಂದರು.
ಇತರ ನಗರಕ್ಕೆ ಉದ್ದಿಮೆಗಳು: ಐ.ಟಿ. ಮತು ಬಿ.ಟಿ ಸೇರಿ ಎಲ್ಲ ಉದ್ದಿಮೆಗಳನ್ನು ಬೆಂಗಳೂರಿಗೆ ಸೀಮಿತ ಮಾಡದೆ, ಕಲಬುರಗಿ, ದಾವಣಗೆರೆ, ಹುಬ್ಬಳ್ಳಿ ಧಾರವಾಡ ಸೇರಿ ಇತರೆ ನಗರಗಳ ಕಡೆ ತೆಗೆದುಕೊಂಡು ಹೋಗಬೇಕಿದೆ. ಉತ್ತರ ಕರ್ನಾಟಕ ಭಾಗದ ಉದ್ದಿಮೆಗಳ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸಲಾಗಿದೆ ಎಂದರು.
ಉನ್ನತ ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯದ ಇತರೆ ನಗರಗಳಲ್ಲಿ ಉದ್ದಿಮೆ ಸ್ಥಾಪನೆಗೆ ಉತ್ತೇಜನ ಕ್ರಮ ಕೈಗೊಳ್ಳುವುದರೊಂದಿಗೆ, ಆರ್ಥಿಕ ಸಹಾಯ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಭೂಮಿ ಖರೀದಿಗೆ ಶೇ.25, ಉದ್ದಿಮೆ ಸ್ಥಾಪನೆಯ ವೆಚ್ಚದ ಶೇ.45 ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಇದರ ಜತೆಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಶೇ.5 ಪೋ›ತ್ಸಾಹ ಧನ, ಮುದ್ರಾಂಕ ಶುಲ್ಕದ ವಿನಾಯಿತಿ, ರಿಯಾಯಿತಿ ದರದಲ್ಲಿ ವಿದ್ಯುತ್, ಕೆಲವು ಉದ್ದಿಮೆಗಳಿಗೆ ಬಾಡಿಗೆ ವೆಚ್ಚವನ್ನು ಭರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸ್ಥಾಪಿಸುವ ಉದ್ದಿಮೆಗಳಿಗೆ ಈ ಸೌಲಭ್ಯ ನೀಡುವುದಿಲ್ಲ ಎಂದರು.
ಉತ್ಕೃಷ್ಠತಾ ಕೇಂದ್ರ ಸ್ಥಾಪನೆ ಶೀಘ್ರ: ಹುಬ್ಬಳ್ಳಿಯಲ್ಲಿ ಎ.ಐ. (ಕೃತಕ ಬುದ್ಧಿಮತ್ತೆ) ಮತ್ತು ಡೇಟಾ ಇಂಜಿನಿಯರಿಂಗ್ಗೆ ಸಂಬಂಧಿಸಿದ ಉತ್ಕೃಷ್ಠತಾ ಕೇಂದ್ರವನ್ನು (ಸೆಂಟರ್ ಆಫ್ ಎಕ್ಸ್ಲೆನ್ಸ್) ಶೀಘ್ರವೇ ಸ್ಥಾಪಿಸಲಾಗುವುದು ಎಂದು ಡಾ. ಅಶ್ವತ್ಥ ನಾರಾಯಣ ತಿಳಿಸಿದರು.