ನ್ಯೂಸ್

ಸಿಎಂ ಬದಲಾವಣೆ ಚರ್ಚೆಯಾಗಿಲ್ಲ; ಪ್ರಿಯಾಂಕ್ ಖರ್ಗೆ

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಹೈಕಮಾಂಡ್ ಮಟ್ಟದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಏನೇ ಚರ್ಚೆ, ಸಮಸ್ಯೆಗಳಿದ್ದರೆ ಹೈಕಮಾಂಡ್ ಗಮನಕ್ಕೆ ತರಲಿ ಎಂದು ಸ್ವಪಕ್ಷೀಯರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದ್ದಾರೆ. ಸಿಎಂ ಖುರ್ಚಿ ಬಗ್ಗೆ ಅನಗತ್ಯವಾಗಿ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಎಲ್ಲರೂ ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಹೇಳಿದ್ದಾರೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ದೀಪಾವಳಿಗೆ ಸರ್ಕಾರ ಪತನವಾಗುತ್ತೆ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಮೊದಲು ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲಿ. ಮೇಲ್ಮನೆ ಪ್ರತಿಪಕ್ಷ ನಾಯಕನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ, ಇದರ ಬಗ್ಗೆ ಏನು ಹೇಳುತ್ತಾರೆ ಎಂದು ಕುಟುಕಿದರು. ವಿಜಯೇಂದ್ರ ಅವರೇ ದೀಪಾವಳಿ ನಂತರ ಅಧ್ಯಕ್ಷರಾಗಿ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಮೊದಲು ಅವರ ಮನೆಯನ್ನು ಸುಧಾರಿಸಿಕೊಳ್ಳಲಿ. ಹತ್ತಾರು ಯುಗಾದಿ, ದೀಪಾವಳಿ ಬಂದು ಹೋಗಿದೆ. ಜನರು ಅವರಿಗೆ ಪಟಾಕಿ ಹೊಡೆದಿದ್ದಾರೆ ಎಂದು ಲೇವಡಿ ಮಾಡಿದರು.