ನ್ಯೂಸ್

ಆಂಧ್ರ ಪ್ರವಾಹ..ಸಂತ್ರಸ್ತರ ಗೋಳು ಕೇಳಲು ಜೆಸಿಬಿ ಮೇಲೇರಿ ಬಂದ ಸಿಎಂ ಚಂದ್ರಬಾಬುನಾಯ್ಡು!

ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ವಿಜಯವಾಡ ಮತ್ತು ಅಮರಾವತಿ ಪ್ರದೇಶಗಳು ಜಲಾವೃತವಾಗಿವೆ.

ಪ್ರವಾಹದ ತೀವ್ರತೆ ಹೆಚ್ಚಾದ ಪರಿಣಾಮ ಸಾವು, ನೋವು ಕಂಡುಬರುತ್ತಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ಜೆಸಿಬಿಯಲ್ಲಿ ತೆರಳಿ ಜನರ ಕಷ್ಟ ಆಲಿಸಿ, ಅಧಿಕಾರಿಗಳಿಗೆ ಸ್ಥಳದಲ್ಲೇ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಂತೆ ಸೂಚಿಸಿದರು.

ಭಾರೀ ಮಳೆಯಿಂದಾಗಿ ವಿಜಯವಾಡ ಬಹುತೇಕ ಮುಳುಗಡೆಯಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಕಾಶಂ ಬ್ಯಾರೇಜ್ ಮತ್ತು ಕರಾವಳಿಯ ತಗ್ಗು ಪ್ರದೇಶಗಳು ಪ್ರವಾಹದಿಂದ ಆವೃತವಾಗಿವೆ.

ಜಕ್ಕಂಪುಡಿ, ಯನಮಲಕುದೂರು, ಪಡಮಟ, ರಾಮಲಿಂಗೇಶ್ವರ ನಗರ, ಭವಾನಿಪುರ ಮತ್ತಿತರ ಭಾಗಗಳು ಸಂಪೂರ್ಣ ಜಲಾವೃತವಾಗಿದೆ. ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ರಸ್ತೆಗಳಲ್ಲಿ 8-10 ಅಡಿ ರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಚಂದ್ರಬಾಬು ಯನಮಲಕುದೂರು, ಪಡಮಟ ಪ್ರದೇಶಗಳಿಗೆ ಭೇಟಿ ನೀಡಿದ್ದರು. ರಾಮಲಿಂಗೇಶ್ವರನಗರ, ಜಕ್ಕಂಪುಡಿ ಹಾಗೂ ಭವಾನಿಪುರದಲ್ಲಿ ಪ್ರವಾಹ ಸಂತ್ರಸ್ತರನ್ನು ಜೆಸಿಬಿ ಮೇಲೇರಿ ಭೇಟಿ ಮಾಡಿದ್ದು, ಗಮನ ಸೆಳೆಯಿತು.

ಬಳಿಕ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಸೇರಿದ ಪವರ್ ಬೋಟ್‌ನಲ್ಲಿ ಸಂತ್ರಸ್ತರ ಕಷ್ಟ ಕೇಳಲು ಆಗಮಿಸಿದರು. ಇನ್ನೂ ಕೆಲವೆಡೆ ಮೊಣಕಾಲುದ್ದದ ನೀರಿನಲ್ಲಿ ನಡೆದೇ ಹೋಗಿ ಸಂತ್ರಸ್ತರ ಭೇಟಿಯಾದರು.