ನ್ಯೂಸ್

ವರಿಷ್ಠರಿಗೆ ವಿಜಯೇಂದ್ರ ಬಗ್ಗೆ ಒಲವಿದೆ ಎಂದ ಮುಖ್ಯಮಂತ್ರಿ ಬಿಎಸ್​ವೈ

ಬೆಂಗಳೂರು: ಪಕ್ಷದ ವರಿಷ್ಠರಿಗೆ ತಮ್ಮ ಪುತ್ರ ವಿಜಯೇಂದ್ರ ಬಗ್ಗೆ ಒಲವಿದೆ. ಆತ ಪಕ್ಷದ ಸಂಘಟನೆಗಾಗಿ ಪ್ರವಾಸ ಮಾಡುತ್ತಿರುವ ಬಗ್ಗೆ ವರಿಷ್ಠರು ಸಂತಸಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಯಾವುದೇ ಮುಖಂಡರು ಸ್ವಂತ ವರ್ಚಸ್ಸಿನಿಂದ ಜನರ ವಿಶ್ವಾಸಗಳಿಸಿ ಬೆಳೆಯಬೇಕೆ ಹೊರತು ಬೇರೆಯವರು ಬೆಳೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ಪಕ್ಷದಲ್ಲಿ 75 ವರ್ಷ ತುಂಬಿದ ನಂತರ ನನಗೆ ಜನರ ಸೇವೆ ಮಾಡಲು ವರಿಷ್ಠರು ಅವಕಾಶ ನೀಡಿದ್ದಾರೆ. ಅಧಿಕಾರ ನಡೆಸಲು ನನಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬೇನಾಮಿ ಪತ್ರಗಳೆಲ್ಲ ಸುಳ್ಳು, ಮೂರು ಜನ ಉಪ ಮುಖ್ಯಮಂತ್ರಿಗಳನ್ನು ಮಾಡುವಾಗ ನನ್ನ ಜತೆ ಚರ್ಚೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಎಷ್ಟು ದಿನ ನಾನೊಬ್ಬನೇ ಇರಲು ಸಾಧ್ಯ, ಪಕ್ಷದಲ್ಲಿ ನನ್ನ ನಂತರವೂ ಬೇರೆಯವರು ಇದ್ದೇ ಇರುತ್ತಾರೆ ಎಂದು ಬಿಎಸ್​ವೈ ಹೇಳಿದರು. ಮುಂದಿನ ಬಾರಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದರು. ಮಂಗಳೂರು ಗಲಭೆಯಲ್ಲಿ ಮೃತರಿಗೆ ಪರಿಹಾರ ಘೋಷಣೆ ಮಾಡಲಾಗಿತ್ತು. ಆದರೆ, ಪೊಲೀಸರ ಆತ್ಮಸ್ಥೈರ್ಯ ಕುಸಿಯುತ್ತದೆ ಎಂದು ಆಯುಕ್ತರು ಮನವಿ ಮಾಡಿದ್ದರಿಂದ ಪರಿಹಾರ ತಡೆ ಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದರು.