ನ್ಯೂಸ್

ಹೈ ಕರೆಗೆ ಕಾಯುತ್ತಿರುವ ಸಿಎಂ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ನೆರೆ ಪರಿಹಾರಕ್ಕೆ ಹೆಚ್ಚಿನ ನೆರವಿಗೆ ಮನವಿ, ವಿವಿಧ ಅಭಿವೃದ್ಧಿ ಯೋಜನೆಗಳು ಸೇರಿ ರಾಜಕೀಯ ವಿಚಾರ ರ್ಚಚಿಸುವುದಕ್ಕಾಗಿ ದೆಹಲಿಗೆ ತೆರಳಲು ಸಿಎಂ ಬಿ.ಎಸ್.ಯಡಿಯೂರಪ್ಪ ಉತ್ಸುಕ ರಾಗಿದ್ದು, ಹೈಕಮಾಂಡ್ ಕರೆಗೆ ಕಾಯುತ್ತಿದ್ದಾರೆ.

ಕಳೆದ ಜನವರಿಯಲ್ಲಿ ಬಿಎಸ್​ವೈ ದೆಹಲಿಗೆ ಹೋಗಿ ಬಂದಿದ್ದರು. ಕರೊನಾ ಕಾರಣದಿಂದಾಗಿ 8 ತಿಂಗಳಿಂದ ಮತ್ತೆ ಹೋಗಲಾಗಿಲ್ಲ. ಮುಖಾ ಮುಖಿ ರ್ಚಚಿಸಿದರೆ, ಪರಸ್ಪರರ ನಿಲುವು ಮನವರಿಕೆಯಾಗುತ್ತದೆ. ಜತೆಗೆ ದೀರ್ಘಾವಧಿಯ ನೇರ ಸಂಪರ್ಕ, ಸಂವಹನದ ಕೊರತೆ ನಿವಾರಣೆ

ಯಾಗುತ್ತದೆ ಎನ್ನುವುದು ಸಿಎಂ ಬಯಕೆ ಯಾಗಿದೆ. ಇದೇ ಕಾರಣಕ್ಕೆ ಖುದ್ದು ಭೇಟಿಯಾಗುವ ಅಪೇಕ್ಷೆಯುಳ್ಳ ಸಂದೇಶವನ್ನು ಯಡಿಯೂರಪ್ಪ ಈಗಾಗಲೇ ರವಾನಿಸಿದ್ದಾರೆ. ಆದರೆ ಕಾಲಾವಕಾಶ ನಿಗದಿಪಡಿಸಿ ಬುಲಾವ್ ನೀಡಬೇಕಾದ ವರಿಷ್ಠರಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲವೆಂದು ಮೂಲಗಳು ಮಾಹಿತಿ ನೀಡಿವೆ.

ಆಕಾಂಕ್ಷಿಗಳಿಗೆ ಚಿಂತೆ: ಸೆ.14ರಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದ್ದು, ಆ ಸಂದರ್ಭ ಸಿಎಂ ದೆಹಲಿಗೆ ತೆರಳಿ ವರಿಷ್ಠರನ್ನು ಒಪ್ಪಿಸಿ, ವಿಧಾನ ಸಭೆ ಅಧಿವೇಶನ ಪೂರ್ವ ಸಂಪುಟ ವಿಸ್ತರಿಸಲಿದ್ದಾರೆ ಎಂಬುದು ಸಚಿವಾಕಾಂಕ್ಷಿಗಳ ಲೆಕ್ಕಾಚಾರ. ಮುಂದಿನ ವಾರ ಸಿಎಂ ದೆಹಲಿ ಯಾತ್ರೆ ಅನಿಶ್ಚಿತವಾಗಿರುವ ಕಾರಣ ಆಕಾಂಕ್ಷಿಗಳ ಚಿಂತೆ ಹೆಚ್ಚಿಸಿದೆ. ಸಚಿವ ಪದವಿ ಮಾತ್ರವಲ್ಲ, ನಿಗಮ- ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಆಸೆಯಿಟ್ಟವರೂ ಬೇಗುದಿಯಲ್ಲಿ ಚಡಪಡಿಸುತ್ತಿದ್ದಾರೆ.

ಸಂಪುಟ ಪುನಾರಚನೆ ಬದಲಿಗೆ ವಿಸ್ತರಣೆ, ಮಾತು ಕೊಟ್ಟವರಿಗೆ ಅವಕಾಶ ಕಲ್ಪಿಸಿ, ಖಾಲಿ ಇರುವ 6 ಸ್ಥಾನ ತುಂಬಬೇಕು ಎಂಬುದು ಸಿಎಂ ಒಲವು, ಇಬ್ಬರನ್ನು ಸೇರಿಸಿಕೊಳ್ಳುವುದಕ್ಕಷ್ಟೇ ವಿಸ್ತರಣೆ ಸೀಮಿತವಾಗಿರಲಿ ಎನ್ನುವುದು ಕೆಲ ವರಿಷ್ಠರ ನಿಲುವು. ಇದೇ ಸದ್ಯಕ್ಕೆ ಬಿಡಿಸಲಾರದ ಕಗ್ಗಂಟಾಗಿದೆ ಎಂದು ಮೂಲಗಳು ಹೇಳಿವೆ.

ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಸೇರ್ಪಡೆಗೆ ಹೈಕಮಾಂಡ್ ಎಂದೋ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಎಚ್.ವಿಶ್ವನಾಥ್, ಸಿ.ಪಿ. ಯೋಗೇಶ್ವರ್ ನಿರಂತರ ಒತ್ತಡ ಹೇರುವ ಮೂಲಕ ಅತ್ತ ವರಿಷ್ಠರು, ಇತ್ತ ಸಿಎಂಗೆ ತಲೆ ನೋವಾಗಿದ್ದಾರೆ. ವಾಗ್ದಾನದಂತೆ ಉಮೇಶ್ ಕತ್ತಿ ಜತೆಗೆ ಪಕ್ಷ ಮೂಲದ ಒಂದಿಬ್ಬರಿಗೂ ಪ್ರಾತಿನಿಧ್ಯ ನೀಡುವುದಕ್ಕೆ ಸಿಎಂ ಆಸಕ್ತಿ ಹೊಂದಿದ್ದಾರೆ. ಮುಖಾಮುಖಿ ಚರ್ಚೆಯಾಗದ ಹೊರತು ಈ ವಿಷಯದಲ್ಲಿ ಮುಂದಿನ ಹೆಜ್ಜೆ ಇಡಬಾರದೆಂಬ ದೃಢ ನಿಲುವು ತಳೆದಿದ್ದಾರೆ ಎನ್ನಲಾಗಿದೆ.

ವರಿಷ್ಠರ ಭೇಟಿ ವಿಳಂಬವೇಕೆ?

ಕರೊನಾ ಸೋಂಕಿನಿಂದ ಬಳಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಗುಣಮುಖರಾಗಿ ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾರ ಭೇಟಿಗೂ ಕಾಲಾವಕಾಶ ಸಿಗುತ್ತಿಲ್ಲ, ಕುಟುಂಬ ಸದಸ್ಯರಿಗೆ ಸದ್ಯಕ್ಕದು ಇಷ್ಟವಿಲ್ಲ. ಭೇಟಿಗೆ ಷಾ ಸಮ್ಮತಿ ಸಿಗದಿರುವುದೇ ಸಿಎಂ ದೆಹಲಿ ಭೇಟಿ ವಿಳಂಬಕ್ಕೆ ಮೂಲ ಕಾರಣವಾಗಿದೆ. ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳಿಗೆ ನೇಮಕ ಮಾತ್ರವಲ್ಲ ಸದ್ಯವೇ ನಡೆಯಲಿರುವ 3 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ, ಬೆಂಗಳೂರು ಗಲಭೆ ಕುರಿತು ರ್ಚಚಿಸುವುದು ಸಿಎಂ ದೆಹಲಿ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿವೆ.