ನ್ಯೂಸ್

ಕರೊನಾ ಕುರಿತ ಸರ್ವ ಪಕ್ಷಗಳ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಣಯಗಳಿವು...

ಬೆಂಗಳೂರು: ವೇಗವಾಗಿ ಹರಡುತ್ತಿರುವ ಕರೊನಾ ವೈರಸ್​ ಸೋಂಕು ತಡೆಗಟ್ಟಲು ಸರ್ವಪಕ್ಷ ಮುಖಂಡರ ಸಭೆ ಕರೆದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಂದು ಚರ್ಚಸಿದರು. ಪ್ರತಿಪಕ್ಷ ನಾಯಕರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೆ ತರಲು ಸಿಎಂ ಬಿಎಸ್​ವೈ ನಿರ್ಧರಿಸಿದ್ದಾರೆ.

ಸರ್ವಪಕ್ಷ ಮುಖಂಡರ ಸಭೆ ಮುಕ್ತಾಯ ಬಳಿಕ ಟ್ವೀಟ್ ಮಾಡಿರುವ ಸಿಎಂ ಬಿಎಸ್​ವೈ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿಪಕ್ಷ ಗಳು ಸಂಕಷ್ಟದ ಸಮಯದಲ್ಲಿ ಸರ್ಕಾರದ ಜತೆ ಕೈ ಜೋಡಿಸಲು ಸಹಮತ ವ್ಯಕ್ತಪಡಿಸಿವೆ.

ಕರೊನಾ ಕುರಿತ ಸರ್ವ ಪಕ್ಷಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಕೆಳಕಂಡಂತಿವೆ...

1.ಸರ್ವ ಪಕ್ಷಗಳ ಸಭೆಯಲ್ಲಿ ನಾಯಕರು ಉಪಯುಕ್ತ ಸಲಹೆಗಳನ್ನು ನೀಡಿರುತ್ತಾರೆ. ಸರ್ಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಲಿದೆ.

2.ಸರ್ವ ಪಕ್ಷದ ಮುಖಂಡರು ಸರ್ಕಾರದ ಕ್ರಮಗಳಿಗೆ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿ, ಈ ಸಂಕಷ್ಟದ ಸನ್ನಿವೇಶದಲ್ಲಿ ಸರ್ಕಾರದ ಜೊತೆ ಕೈಜೋಡಿಸುವುದಾಗಿ ಸಹಮತ ವ್ಯಕ್ತಪಡಿಸಿದರು.

3.ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್‍ಗಳು ಹಾಗೂ ಅರೇ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಾಟಲಿ ಗಳನ್ನು ಸರಬರಾಜು ಮಾಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು.

4.ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಕ್ಷಣಾ ಸಾಧನಗಳನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಲಾಗುವುದು.

5.ರಾಜ್ಯದ ಗಡಿಗಳಲ್ಲಿ ಸಿಕ್ಕಿಕೊಂಡಿರುವ ಜನರ ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಆಶ್ರಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು.

6.ಸೋಂಕಿಗೊಳಗಾಗಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲು ಹಾಗೂ ಆರೋಗ್ಯವಾಗಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು.

7.ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಟೆಸ್ಟಿಂಗ್ ಕಿಟ್ (ಪರೀಕ್ಷಾ ಸಾಧನಗಳು) ವಿತರಿಸಲಾಗುವುದು.

8.ರೈತರ ಕೃಷಿ ಉತ್ಪನ್ನಗಳ, ಸಾಗಣೆ, ಮಾರಾಟ ಮತ್ತು ಒಳಕೆದಾರರಿಗೆ ಸೂಕ್ತವಾಗಿ ವಿತರಿಸಲು ವ್ಯವಸ್ಥೆ ಮಾಡಲಾಗುವುದು.

9.ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳ ವಿತರಣೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.

10.ಪಡಿತರವನ್ನು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಸಲಹೆಯನ್ನು ವಿರೋಧ ಪಕ್ಷದ ನಾಯಕರು ನೀಡಿದ್ದು, ಆ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.

11.ಮುಸ್ಲಿಂ ಬಾಂಧವರ ಜತೆ ನಾನು ಸಭೆ ನಡೆಸಿದ್ದು, ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆಯನ್ನು ನಡೆಸಲು ಒಪ್ಪಿ ಸಹಕರಿಸಿರುತ್ತಾರೆ. ಅವರನ್ನು ಅಭಿನಂದಿಸುತ್ತೇನೆ.