ಬೆಂಗಳೂರು: ಯಡಿಯೂರಪ್ಪ ಸರ್ಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಅಂತಿಮ ಮುಹೂರ್ತ ನಿಗದಿಯಾಗಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ 10 ವಲಸಿಗ ಶಾಸಕರು ಮಾತ್ರ ಗುರುವಾರ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ದಿಢೀರ್ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ವರಿಷ್ಠರು ಪಕ್ಷದವರನ್ನು ಬಿಟ್ಟು ವಲಸಿಗ ಶಾಸಕರನ್ನಷ್ಟೇ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಫರ್ವನು ಹೊರಡಿಸಿದ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಅತೃಪ್ತರ ಅಸಮಾಧಾನ ತಣಿಸುವ ಹೊಣೆಗಾರಿಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಹೆಗಲೇರಿದೆ. ಬಿಎಸ್ವೈ ಸಿಎಂ ಆದ ಬಳಿಕ ನಡೆಯುತ್ತಿರುವ 2ನೇ ಸಂಪುಟ ವಿಸ್ತರಣೆ ಇದಾಗಿದೆ. ಇದರೊಂದಿಗೆ ಸಚಿವರ ಸಂಖ್ಯೆ 28ಕ್ಕೆ ಏರಿಕೆಯಾದರೆ, 6 ಸ್ಥಾನಗಳು ಖಾಲಿ ಉಳಿಯಲಿವೆ. ಯಡಿಯೂರಪ್ಪ 10 ವಲಸಿಗರ ಜತೆ ಇಬ್ಬರು ಅಥವಾ ಮೂವರು ಮೂಲ ಬಿಜೆಪಿಗರಿಗೂ ಅವಕಾಶ ನೀಡುವ ಉದ್ದೇಶ ಹೊಂದಿದ್ದರು. ಆದರೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸೇರ್ಪಡೆ ವಿಚಾರ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಸಿಎಂ ನಿರ್ಧಾರಕ್ಕೆ ಬ್ರೇಕ್ ಹಾಕಿದೆ.
ಇಡೀ ದಿನದ ಹೈಡ್ರಾಮಾ: ಯಡಿಯೂರಪ್ಪ ಇತ್ತೀಚೆಗೆ ದೆಹಲಿಗೆ ಹೋಗಿ ವರಿಷ್ಠರೊಂದಿಗೆ ರ್ಚಚಿಸಿದ್ದಾಗ ಪಟ್ಟಿ ಪಡೆದುಕೊಂಡಿದ್ದ ಅಮಿತ್ ಷಾ ಹಾಗೂ ಜೆ.ಪಿ. ನಡ್ಡಾ ಸಂಪುಟ ವಿಸ್ತರಣೆ ಸಿದ್ಧತೆ ಮಾಡಿಕೊಳ್ಳಿ, ನಾವೇ ಪಟ್ಟಿ ಕಳುಹಿಸುತ್ತೇವೆ ಎಂದಿದ್ದರು. ಹತ್ತು ವಲಸಿಗರ ಜತೆ ಮೂವರು ಮೂಲ ಬಿಜೆಪಿಗರಿಗೂ ಅವಕಾಶ ಕಲ್ಪಿಸುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಿಎಂ ತಿಳಿಸಿದ್ದರು. ಉಮೇಶ್ ಕತ್ತಿ, ಹಾಲಪ್ಪ ಆಚಾರ್ ಹಾಗೂ ಅರವಿಂದ ಲಿಂಬಾವಳಿಯನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಿದ್ದರು. ಆದರೆ ಹೈಕಮಾಂಡ್ನಲ್ಲಿ ಪ್ರಭಾವಿಯಾಗಿರುವ ರಾಜ್ಯ ಮೂಲದ ಮುಖಂಡರೊಬ್ಬರು ಯೋಗೇಶ್ವರ್ ಅವರನ್ನು ಸೇರಿಸಿಕೊಳ್ಳುವಂತೆ ವರಿಷ್ಠರ ಮೂಲಕ ಸೂಚನೆ ಕೊಡಿಸಿದರು. ಯೋಗೇಶ್ವರ್ ಹೆಸರು ಪ್ರಸ್ತಾಪವಾದಾಗ ಅನೇಕ ಶಾಸಕರು ಸಿಡಿದೆದ್ದು ಸಭೆಯ ಮೇಲೆ ಸಭೆಗಳನ್ನು ನಡೆಸುವ ಮೂಲಕ ವಿರೋಧ ಸೂಚಿಸಿದರು.
ಅದು ಹೈಕಮಾಂಡ್ ಗಮನಕ್ಕೂ ಬರುವಂತೆ ನೋಡಿಕೊಂಡರು. ಇನ್ನೊಂದೆಡೆ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಸಹ ಯೋಗೇಶ್ವರ್ ಪರವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದರು. ಯಡಿಯೂರಪ್ಪ ಆಪ್ತರಾದ ಕತ್ತಿ ಹಾಗೂ ಲಿಂಬಾವಳಿ ಸಂಪುಟ ಸೇರುವುದು ಖಚಿತ ಎಂದೇ ಬುಧವಾರ ಮಧ್ಯಾಹ್ನದವರೆಗೂ ಹೇಳಲಾಗುತ್ತಿತ್ತು. ಅಂಗಾರ, ಹಾಲಾಡಿ, ಹಾಲಪ್ಪ ಆಚಾರ್ ಹೆಸರು ಗುರುವಾರ ಬೆಳಗ್ಗೆಯೊಳಗೆ ಅಂತಿಮವಾಗಲಿದೆ ಎನ್ನಲಾಗಿತ್ತು. ಆದರೆ, ರಾತ್ರಿವೇಳೆಗೆ ಎಲ್ಲವೂ ಬದಲಾಯಿತು.
ರಾತ್ರಿ ಬಂದ ಸೂಚನೆ: ಬುಧವಾರ ಬೆಳಗ್ಗೆ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ದೂರವಾಣಿಯಲ್ಲಿ ಮಾತನಾಡಿದಾಗ 10 ಜನರಿಗಷ್ಟೇ ಒಪ್ಪಿಗೆ ನೀಡಿದ್ದರು. ಆದರೆ ಸಿಎಂ ಮೂಲ ಬಿಜೆಪಿಗರಲ್ಲಿ ಇಬ್ಬರಿಗೆ ಅವಕಾಶ ಕೊಡುವಂತೆ ಮನವಿ ಮಾಡಿದಾಗ ಸಂಜೆ ವೇಳೆಗೆ ತೀರ್ಮಾನ ಮಾಡುವುದಾಗಿ ಹೇಳಿದ್ದರು. ಕಲಬುರಗಿಯಿಂದ ಬಂದ ಯಡಿಯೂರಪ್ಪ ನಾಲ್ಕೈದು ಬಾರಿ ಷಾ ಹಾಗೂ ನಡ್ಡಾ ಅವರನ್ನು ಸಂರ್ಪಸುವ ಪ್ರಯತ್ನ ಮಾಡಿದರೂ ಸಿಕ್ಕಿರಲಿಲ್ಲ. ಸುಮಾರು 8.15ರ ವೇಳೆಗೆ ಅಮಿತ್ ಷಾ ಹತ್ತು ಜನರನ್ನು ಮಾತ್ರ ಸೇರಿಸಿಕೊಳ್ಳಿ, ನಂತರ ದೆಹಲಿಗೆ ಬನ್ನಿ ಎಂಬ ಸೂಚನೆ ನೀಡಿದರು. ಬಳಿಕ ಯಡಿಯೂರಪ್ಪ ಅದನ್ನೇ ಪ್ರಕಟಿಸಿದರು.
ಕುಮಠಳ್ಳಿಗೆ ಇಲ್ಲ: ಲಕ್ಷ್ಮಣ ಸವದಿ ಹಾಗೂ ಕುಮಠಳ್ಳಿ ಒಂದೇ ಕ್ಷೇತ್ರದವರಾದ ಕಾರಣ ಕುಮಠಳ್ಳಿಗೆ ಅವಕಾಶ ತಪು್ಪತ್ತಿದೆ ಎಂದು ಹೇಳಲಾಗಿದೆ.
10 ಜನರಿಗೂ ಸಿಎಂ ಕರೆ: ಹೈಕಮಾಂಡ್ ಒಪ್ಪಿಗೆ ನೀಡಿರುವ ಎಲ್ಲ ಹತ್ತು ಜನ ವಲಸಿಗರಿಗೂ ಸಿಎಂ ಸ್ವತಃ ಕರೆ ಮಾಡಿ ಮಂತ್ರಿಗಳಾಗಲು ಸಿದ್ಧರಾಗುವಂತೆ ಆಹ್ವಾನ ನೀಡಿದರು.
ಮನವೊಲಿಸುತ್ತಿರುವ ಸಿಎಂ: ಹೈಕಮಾಂಡ್ನಿಂದ 10 ಜನರಿಗಷ್ಟೇ ಒಪ್ಪಿಗೆ ಸಿಗುತ್ತಿದ್ದಂತೆ ಆಕಾಂಕ್ಷಿಗಳ ಜತೆ ಚರ್ಚೆ ನಡೆಸುತ್ತಿರುವ ಯಡಿಯೂರಪ್ಪ, ಮುಂದಿನ ವಿಸ್ತರಣೆಯಲ್ಲಿ ಅವಕಾಶ ನೀಡುವುದಾಗಿ ಹೇಳಿ ಮನವೊಲಿಸುತ್ತಿದ್ದಾರೆ.
ಖಾತೆ ಸಮಸ್ಯೆ: ಸಂಪುಟ ವಿಸ್ತರಣೆ ಬೆನ್ನಿಗೆ ಖಾತೆಗಳ ಹಂಚಿಕೆ ಸಮಸ್ಯೆ ತಲೆದೋರಲಿದೆ. ಆದರೆ ವಿಧಾನ ಮಂಡಲ ಅಧಿವೇಶನ ಮುಗಿಯುವ ತನಕ ಖಾತೆಗಳ ಹಂಚಿಕೆಯಾಗುವುದಿಲ್ಲವೆಂದು ಬಿಜೆಪಿಯ ಒಂದು ಮೂಲ ಹೇಳುತ್ತದೆ. ಸಿಎಂ ಒಂದೆರಡು ದಿನಗಳಲ್ಲಿ ದೆಹಲಿಗೆ ಹೋಗಿ ಖಾತೆಗಳನ್ನು ಅಂತಿಮ ಮಾಡಿಕೊಂಡು ಬರಲಿದ್ದಾರೆ ಎಂಬುದು ಅವರ ಆಪ್ತಮೂಲಗಳ ಮಾಹಿತಿ.
ಮತ್ತೊಂದು ವಿಸ್ತರಣೆ: ಸಿಎಂ ದೆಹಲಿಗೆ ಹೋಗಿ ಬಂದ ನಂತರ ಮತ್ತೊಂದು ಸುತ್ತಿನ ವಿಸ್ತರಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಜೂನ್ ತನಕ ವಿಸ್ತರಣೆಯಾಗುವುದಿಲ್ಲ, ಜೂನ್ ಅಥವಾ ಜುಲೈನಲ್ಲಿ ಪುನಾರಚನೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಸ್ಪಷ್ಟಪಡಿಸುತ್ತವೆ.
ಸಚಿವರಾಗುವವರು
ಎಷ್ಟೊತ್ತಿಗೆ ಪ್ರಮಾಣ
# ರಾಜಭವನದಲ್ಲಿ ಬೆಳಗ್ಗೆ 10.30
# ರಾಜ್ಯಪಾಲ ವಜುಬಾಯಿ ವಾಲಾ ಅವರಿಂದ ಪ್ರಮಾಣ ವಚನ ಬೋಧನೆ
# ಹೊಸದಾಗಿ ಸೇರುವವರು 10
# ಸಿಎಂ ಸೇರಿ ಸಚಿವರ ಸಂಖ್ಯೆ 28ಕ್ಕೇರಿಕೆ
# ಖಾಲಿ ಉಳಿಯುವ ಸ್ಥಾನಗಳು 6
ನಿರ್ಧಾರಕ್ಕೆ ಕಾರಣ?
# ಮೂಲ ನಿವಾಸಿಗಳಲ್ಲಿ 2 ಡಜನ್ಗೂ ಹೆಚ್ಚು ಆಕಾಂಕ್ಷಿಗಳಿರುವುದು
# ಸೋತವರಿಂದಲೂ ನಡೆದಿರುವ ಪ್ರಯತ್ನ
# ಅಸಮಾಧಾನ ಹೆಚ್ಚಬಹುದೆಂಬ ಆತಂಕ
ವರಿಷ್ಠರು 10 ಜನರನ್ನು ಮಾತ್ರ ಸಚಿವರನ್ನಾಗಿ ಮಾಡುವಂತೆ ಹೇಳಿದ್ದಾರೆ. ಮುಂದೆ ದೆಹಲಿಗೆ ಬಂದು ಮಾತನಾಡಲು ಸೂಚಿಸಿದ್ದಾರೆ. ಮಹೇಶ್ ಕುಮಠಳ್ಳಿ ಅವರನ್ನು ಸಚಿವರನ್ನಾಗಿ ಮಾಡುವುದು ಕಷ್ಟ, ಅವರಿಗೆ ಪಕ್ಷದಲ್ಲಿ ಅವಕಾಶ ನೀಡಲಾಗುವುದು. ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ. ಉಮೇಶ್ ಕತ್ತಿ ಮುಂದೆ ನೂರಕ್ಕೆ ನೂರರಷ್ಟು ಮಂತ್ರಿಯಾಗುತ್ತಾರೆ. | ಯಡಿಯೂರಪ್ಪ ಮುಖ್ಯಮಂತ್ರಿ