ನ್ಯೂಸ್

ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭ; ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಬೊಮ್ಮಾಯಿ

ರಾಯಚೂರು: ಹಲವು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ನಾಯಕರು ನೊಂದ ಸಮುದಾಯಗಳಿಗೆ ನ್ಯಾಯ ಕೊಡಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಬಿಜೆಪಿ ಜನಸಂಕಲ್ಪ ಯಾತ್ರೆ ಅಂಗವಾಗಿ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೇಸೂಗೂರಿನಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನನ್ನನ್ನು ಆರ್‌ಎಸ್‌ಎಸ್ ಕೈಗೊಂಬೆ ಅಂತ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಅದು ದೇಶಪ್ರೇಮಿ ಸಂಘಟನೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಸಂಘಟನೆ. ಜನ ಸಮುದಾಯಕ್ಕೆ ಧ್ವನಿ ಕೊಟ್ಟ ಶ್ರೇಷ್ಠ ಸಂಸ್ಥೆ. ಅದರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಬೊಮ್ಮಾಯಿ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಯಾವತ್ತು ಕಾಂಗ್ರೆಸ್ ಸೇರಿದರೋ ಅವತ್ತೇ ಸಮಾಜವಾದವನ್ನ ಮಡಚಿ ಮನೇಲಿಟ್ಟರು. ಈಗ ಆ ಸಣ್ಣ ಹುಡುಗನ (ರಾಹುಲ್ಚಗಾಂಧಿ) ಹಿಂದೆ ಓಡುತ್ತಾರೆ. ಆ ಹುಡುಗ ನಡೆದರೆ ಇವರೂ ನಡೀತಾರೆ, ಓಡಿದರೆ ಇವರೂ ಓಡುತ್ತಾರೆ. ಆತ ಕುಳಿತರೆ ಇವರೂ ಕೂರುತ್ತಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಪ್ರಚಲಿತಕ್ಕೆ ತರೋದಕ್ಕಾಗಿ ಈ ಭಾರತ್ ಜೋಡೊ ಯಾತ್ರೆ ಮಾಡ್ತಿದ್ದಾರೆ. ಅಂದ್ರೆ 'ರೀ ಲಾಂಚಿಂಗ್ ರಾಹುಲ್ ಗಾಂಧಿ' ಎಂದು ಬೊಮ್ಮಾಯಿ ಕುಟುಕಿದರು.

ಸಿದ್ದರಾಮಯ್ಯನವರೇ, ಅಂಥ ಯಾತ್ರೆಗೆ ನೀವು ಸಾಥ್ ಕೊಡ್ತೀರಿ? ನಿಮ್ಮ ಸ್ಥಾನ ಎಲ್ಲಿತ್ತು, ಏನಾಗಿದೆ ಅನ್ನೋದನ್ನ ನೋಡಿಕೊಳ್ಳಿ. ನಮ್ಮ ಬಗ್ಗೆ ನೀವು ಮಾತಾಡ್ತೀರಿ ಎಂದ ಬೊಮ್ಮಾಯಿ ಹರಿಹಾಯ್ದರು.

ನಿಮ್ಮ ಅಧಿಕಾರಾವಧಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಏನೂ ಕೊಡಲಿಲ್ಲ. ನಾಚಿಕೆ ಆಗ್ಬೇಕು ನಿಮಗೆ. ಯಡಿಯೂರಪ್ಪನವರೂ ಅನುದಾನ ಕೊಟ್ಡಿದ್ದರು. ನಾನು ಮೂರು ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ಕೆಲಸ ಆರಂಭ ಆಗಿದೆ. ರಾಯಚೂರು ವಿಶ್ವವಿದ್ಯಾಲಯ, ಏರ್ಪೋರ್ಟ್, ಪೌಷ್ಟಿಕ ಆಹಾರಕ್ಕೆ ವಿಶೇಷ ಅನುದಾನ ಕೊಟ್ಡಿದ್ದೇವೆ. 1101 ಶಾಲೆಗಳ ಜೊತೆಗೆ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡ್ತಿದ್ದೇವೆ. ಮುಂದಿನ ಬಜೆಟ್‌ನಲ್ಲಿ ಈ ಅನುದಾನವನ್ನು ಐದು ಸಾವಿರ ಕೋಟಿ ರೂ.ಗೆ ಹೆಚ್ಚಿಸ್ತೇನೆ ಎಂದು ಬೊಮ್ಮಾಯಿ ಹೇಳಿದರು.

"ಕಾಂಗ್ರೆಸ್ ನಾಯಕರೇ, ನೀವು ಕಲ್ಯಾಣ ಕರ್ನಾಟಕ, ದೀನ ದಲಿತರಿಗೆ, ರೈತರಿಗೆ ಕೈಕೊಟ್ರಿ. ಸುಳ್ಳನ್ನ ಹತ್ತುಬಾರಿ ಹೇಳಿದ್ರಿ. ನಿಮ್ಮ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದ್ರಲ್ಲಿ ಇದ್ದವ್ರು ಸ್ವಲ್ಪವೇ ದಿನದಲ್ಲಿ ನಮ್ ಕಡೆ ಬರಲಿದ್ದಾರೆ, ನೋಡ್ತಿರಿ" ಎಂದರು.