ನ್ಯೂಸ್

ಸಿಎಂ ಬೊಮ್ಮಾಯಿ ಎದುರು ಸಿದ್ದರಾಮಯ್ಯರನ್ನ ನೆನೆದ ಶಾಸಕ ಪುಟ್ಟರಂಗಶೆಟ್ಟಿ! ಸಿದ್ದು ಮಾದರಿ ಅನುಸರಿಸಿ ಅಂದಿದ್ದೇಕೆ?

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಶಾಸಕ ಸಿ‌.ಪುಟ್ಟರಂಗಶೆಟ್ಟಿ ಅವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ನೆನೆದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ ಪುಟ್ಟರಂಗಶೆಟ್ಟಿ, ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಆಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅನುದಾನ ಕೊಟ್ಟಿದ್ದರು. ಅವರ ಮಾದರಿಯಲ್ಲೇ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಮನವಿ ಮಾಡಿದರು.

ಈಗ ಎರಡನೇ ಬಾರಿಗೆ ನೀವು ಜಿಲ್ಲೆಗೆ ಬಂದಿದ್ದೀರಿ. ಕುಡಿಯುವ ನೀರಿನ ಸೌಲಭ್ಯ ಇಲ್ಲ. ಸುವರ್ಣಾವತಿ ಯೋಜನೆಯ ನೀರು ಸಾಲುತ್ತಿಲ್ಲ. 276 ಕೋಟಿ ರೂ. ವೆಚ್ಚದಲ್ಲಿ ನೀರು ಪೂರೈಕೆ ಯೋಜನೆ ರೂಪಿಸಲಾಗಿದೆ. 136 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇನ್ನುಳಿದ ಹಣ ಬಿಡುಗಡೆ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಬೇಕು. 50 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆಗಬೇಕು ಎಂದರು.