ಮಾಗಡಿ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿವಾದ ಇನ್ನೆರಡು ದಿನದಲ್ಲಿ ಅಂತಿಮಗೊಳ್ಳಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ವಷ್ಟಪಡಿಸಿದರು.
ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಮಂಗಳವಾರ ಕೋವಿಡ್ ಸಂತ್ರಸ್ತರಿಗೆ, ಬಡ ಜನರಿಗೆ ದಿನಸಿ ಕಿಟ್ ವಿತರಣೆ ಮತ್ತು ಎರಡು ಆಂಬುಲೆನ್ಸ್ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ನಾಳೆಯಿಂದ ಮೂರು ದಿನಗಳ ರಾಜ್ಯದಲ್ಲಿ ಇರುತ್ತಾರೆ. ಈ ವೇಳೆ ಯಾರದ್ದಾದರೂ ಅಹವಾಲು ಇದ್ದರೆ ಹೇಳಿಕೊಳ್ಳುತ್ತಾರೆ. ಬದಲಾವಣೆಯಂತಹ ಪರಿಸ್ಥಿತಿ, ಸಮಸ್ಯೆ ಉದ್ಭವಿಸುವುದಿಲ್ಲ. ಎಲ್ಲವನ್ನೂ ಪ್ರಧಾನ ಕಾರ್ಯದರ್ಶಿಗಳು ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಒಬ್ಬರಿಗೆ 1 ಲಕ್ಷ ರೂ. ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನಿಸಿರುವುದು ಐತಿಹಾಸಿಕ ತೀರ್ಮಾನವಾಗಿದೆ. ಇದಕ್ಕೆ ಸುಮಾರು 400 ಕೋಟಿ ರೂ. ಖರ್ಚಾಗಲಿದ್ದು ನಾಡಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಕರೊನಾ 2ನೇ ಅಲೆಯನ್ನು ಸಿಎಂ ನಿಯಂತ್ರಿಸಿದ್ದಾರೆ ಎಂದರು.
ಕೆಆರ್‌ಐಡಿಎಲ್ ನಿಗಮದ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಕಟ್ಟಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆಯಾಗಿ ಅನಂತ್ ಕುಮಾರ್ ಇದ್ದದ್ದನ್ನು ನೋಡಿದ್ದೇವೆ. ಬಿ.ಎಸ್. ಯಡಿಯೂರಪ್ಪ ಅವರು ಯಾವ ತಪ್ಪೂ ಮಾಡಿಲ್ಲ. ಅಂತಹ ಸಂದರ್ಭ ಎದುರಾದರೆ ಪಕ್ಷದ ಹಿರಿಯರು, ಹೈಕಮಾಂಡ್, ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಬಿಎಸ್‌ವೈ ಬದಲಾವಣೆ ಮಾಡುತ್ತೇವೆ ಎಂದು ಹೈಕಮಾಂಡ್ ಎಲ್ಲೂ ಹೇಳಿಲ್ಲ.
ಬದಲಾವಣೆ ಬಗ್ಗೆ ಯಾರು ಈ ರೀತಿ ಗೊಂದಲ ಸೃಷ್ಟಿಸುತ್ತಿದ್ದಾರೋ ಗೊತ್ತಿಲ್ಲ. ಇನ್ನು ಎರಡು ವರ್ಷ ಬಿಎಸ್‌ವೈ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಮತ್ತೆ ಮಾಧ್ಯಮಗಳು ಪ್ರಶ್ನೆ ಮಾಡುವುದನ್ನು ನೋಡಿದರೆ ನಮ್ಮಲ್ಲೇ ಗೊಂದಲ ಸೃಷ್ಟಿಯಾಗುವಂತಿದೆ ಎಂದು ಮುಖ್ಯಮಂತ್ರಿಗಳ ಪರ ಬ್ಯಾಟ್ ಬೀಸಿದರು.
ಬಿಎಂಆರ್‌ಡಿಎ ಅಧ್ಯಕ್ಷ ಡಾ.ರಂಗಧಾಮಯ್ಯ ಮಾತನಾಡಿ, ಜನರ ಆರೋಗ್ಯಕ್ಕೆ ಬೇಕಾದ ಸವಲತ್ತು ಕಲ್ಪಿಸಲು ಬಿಎಂಆರ್‌ಡಿಎ ವತಿಯಿಂದ 3 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಪೈಕಿ ಇಂದು 2 ಆಂಬುಲೆನ್ಸ್ ಗಳನ್ನು ನೀಡಲಾಗುತ್ತಿದೆ. ಹಾಗೆಯೇ ಮಾಗಡಿಯಲ್ಲಿ ಮಾರುಕಟ್ಟೆ, ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಆಡಿಟೋರಿಯಂ ನಿರ್ಮಾಣವಾಗುತ್ತಿದೆ. ಉಳಿದ ಹಣದಲ್ಲಿ ಆಸ್ಪತ್ರೆಗೆ ಬೇಕಾದ ಸೌಲಭ್ಯ ಕಲ್ಪಿಸಲಾಗುವುದು. ಪ್ರಥಮ ಹಂತದಲ್ಲಿ ಕ್ಷೇತ್ರದ ಬಡವರಿಗೆ ವೈಯಕ್ತಿಕವಾಗಿ 15 ಸಾವಿರ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದರು.
ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿ, ಬಿಎಂಟಿಸಿ ನಿರ್ದೇಶಕ ಕೆ.ಪಿ. ಬೃಂಗೇಶ್, ವಿವಿಧ ಪ್ರಾಧಿಕಾರಗಳ ಅಧ್ಯಕ್ಷರಾದ ಜಗನ್ನಾಥ್, ಮುರಳಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ರಮೇಶ್, ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲ್ ಮತ್ತಿತರರು ಇದ್ದರು
ವಾರದಲ್ಲಿ ಆಕ್ಸಿಜನ್ ಘಟಕ ಲೋಕಾರ್ಪಣೆ : ನಾನು ಕೆಆರ್‌ಐಡಿಎಲ್ ಅಧ್ಯಕ್ಷನಾಗಲು, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಜನ್ಮಸ್ಥಳ ವೀರಾಪುರದಲ್ಲಿ, ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಶ್ರೀಗಳ ಜನ್ಮಸ್ಥಳ ಬಾನಂದೂರು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಎಸ್.ಟಿ. ಸೋಮಶೇಖರ್ ಸಹಕಾರ ನೀಡಿ ಮಾರ್ಗದರ್ಶನ ನೀಡಿದ್ದಾರೆ.
ಜಿಲ್ಲೆಯ ಐದು ಯೋಜನಾ ಪ್ರಾಧಿಕಾರಗಳಿಂದ 7 ಕೋಟಿ ರೂ. ಅನುದಾನವನ್ನು ಜಿಲ್ಲೆಯ ಜನರ ಆರೋಗ್ಯ ಕಲ್ಪಿಸಲು ನೀಡಿದ್ದಾರೆ. ಕೆಆರ್‌ಐಡಿಎಲ್ ನಿಗಮದಿಂದ ಬೆಂಗಳೂರು, ಚಾಮರಾಜನಗರ ನಗರ ಸೇರಿದಂತೆ ಐದು ಕಡೆ ಆಕ್ಸಿಜನ್ ಘಟಕ ನಿರ್ಮಿಸಲು ಹಣ ಬಿಡುಗಡೆಯಾಗಿ ಕೆಲಸವೂ ಪ್ರಗತಿಯಲ್ಲಿದೆ. ಕನಕಪುರ ಮತ್ತು ಮಾಗಡಿಯಲ್ಲಿ ಆಕ್ಸಿಜನ್ ಘಟಕ ಕಾಮಗಾರಿ ನಡೆಯುತ್ತಿದ್ದು, ಇನ್ನೊಂದು ವಾರದ ಒಳಗೆ ಲೋಕಾರ್ಪಣೆಗೊಳಿಸಲಾಗುವುದು.
ಯಶವಂತಪುರ ಕ್ಷೇತ್ರದಲ್ಲಿ ಕರೊನಾದಿಂದ ಮೃತಪಟ್ಟ ಕುಟುಂಬಕ್ಕೆ 1 ಲಕ್ಷ ರೂ. ನೀಡುವ ಕಾರ್ಯಕ್ರಮವನ್ನು ಪ್ರಥಮವಾಗಿ ರೂಪಿಸಿದ್ದು ಎಸ್.ಟಿ.ಸೋಮಶೇಖರ್ ಎಂದು ರುದ್ರೇಶ್ ಪ್ರಶಂಸೆ ವ್ಯಕ್ತಪಡಿಸಿದರು.
ಜಾತ್ರೆಯಂತೆ ಜನ : ಕೆಂಪೇಗೌಡ ಕೋಟೆಯಲ್ಲಿ ದಿನಸಿ ಕಿಟ್ ಪಡೆಯಲು ಜಾತ್ರೆಯಂತೆ ಜನ ಸೇರಿದ್ದರು. ಈ ವೇಳೆ ಡಿವೈಎಸ್‌ಪಿ ಟಿ.ಎ. ಓಂಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್ ಬಿ.ರವಿ, ಪಿಎಸ್‌ಐ ಎಸ್. ಶ್ರೀಕಾಂತ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಿ ಕಿಟ್ ವಿತರಿಸಲು ವ್ಯವಸ್ಥೆ ಮಾಡಲಾಯಿತು