ನ್ಯೂಸ್

ನೊಂದವರಿಗೆ ಕಾನೂನು ನೆರವು; ಇಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನ

ನಾಗರಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನವೆಂಬರ್ 9ರಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಕುರಿತು ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಏರ್ಪಡಿಸಿದ್ದ ಕ್ಲಬ್​ಹೌಸ್ ಸಂವಾದದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ್ ಶೆಟ್ಟಿ ಹಾಗೂ ನಾಮನಿರ್ದೇಶಿತ ಸದಸ್ಯ ಶ್ರೀಧರ್ ಪ್ರಭು ಅವರು ಹಂಚಿಕೊಂಡ ಮಾಹಿತಿ ಇಲ್ಲಿದೆ.

ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಯಾರು ಬೇಕಾದರೂ ಉಚಿತ ಕಾನೂನು ಸಲಹೆಗಳನ್ನು ಪಡೆದುಕೊಳ್ಳಬಹುದು. ಆದರೆ, ಉಚಿತ ಕಾನೂನು ನೆರವು ಎಲ್ಲರಿಗೂ ಸಿಗುವುದಿಲ್ಲ. ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 12ರಲ್ಲಿ ಉಲ್ಲೇಖಿಸಿರುವಂತೆ ಮಹಿಳೆಯರು ಮತ್ತು ಮಕ್ಕಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಂಗವಿಕಲರು, ಕಾರ್ವಿುಕ ವರ್ಗ, ಮಾನವ ಕಳ್ಳಸಾಗಣೆಗೆ ಒಳಗಾದವರು, ಕಾರ್ವಿುಕ ವರ್ಗ, ಕಸ್ಟಡಿಯಲ್ಲಿರುವ ಆರೋಪಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾದವರು, ವಾರ್ಷಿಕ 3 ಲಕ್ಷಕ್ಕೂ ಕಡಿಮೆ ಆದಾಯ ಇರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಪ್ರಾಧಿಕಾರದ ವತಿಯಿಂದಲೇ ವಕೀಲರನ್ನೂ ನೇಮಿಸಲಾಗುತ್ತದೆ.

ಕಾನೂನು ಸೇವೆಗಳ ದಿನ ಏಕೆ?

ಸರ್ವರಿಗೂ ನ್ಯಾಯ ಒದಗಿಸಲು ಮತ್ತು ಜನರ ಮನೆ ಬಾಗಿಲಿಗೆ ಕಾನೂನು ಸೇವೆಗಳನ್ನು ಕೊಂಡೊಯ್ಯುವ ಸಲುವಾಗಿ 1987ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ ರಚನೆ ಮಾಡಲಾಯಿತು. ಇದನ್ನು ಕಾರ್ಯರೂಪಕ್ಕೆ ತರಲು 1995ರಲ್ಲಿ ಕೇಂದ್ರ ಕಾನೂನು ಸೇವೆಗಳ ಪ್ರಾಧಿಕಾರ ರಚನೆ ಮಾಡಿ ಸುಪ್ರೀಂಕೋರ್ಟ್ ಯುದ್ಧೋಪಾದಿಯಲ್ಲಿ ಕೆಲಸ ಮಾಡಿತು. ಇದರ ಪ್ರತಿಫಲವೇ ಲೋಕ ಅದಾಲತ್. ಕಾನೂನು ಸೇವೆ ಒದಗಿಸುವ ನಿಟ್ಟಿನಲ್ಲಿ ರಚನೆ ಆಗಿರುವ ಕಾನೂನು ಸೇವೆಗಳ ಪ್ರಾಧಿಕಾರದ ತೆರೆಮರೆಯಲ್ಲಿ ನೂರಾರು ನ್ಯಾಯಾಧೀಶರು ಕೆಲಸ ಮಾಡಿದ್ದಾರೆ. ‘ಸರ್ವರಿಗೂ ನ್ಯಾಯ ಸರ್ವಸಮಾನ’ ಎಂಬ ಧ್ಯೇಯದಡಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ರಚನೆ ಮಾಡಲಾಗಿದೆ. ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗಿವೆ. ಇದರಿಂದ ಜನರಿಗೆ ಮತ್ತು ಕೋರ್ಟ್​ಗೆ ನೂರಾರು ಕೋಟಿ ವೆಚ್ಚ ಉಳಿದಿದೆ. ಕೋರ್ಟ್ ಮೂಲಕ ಕಾನೂನು ಸೇವೆ ಒದಗಿಸುವುದು ಜತೆಗೆ ಜನರ ನಡುವೆ ಹೋಗಿ ನ್ಯಾಯ ತಲುಪಿಸುವ ಪ್ರಯತ್ನ ಸಹ ನಡೆಯುತ್ತಿದೆ.

ಹಲವು ಕಾರ್ಯಕ್ರಮ: ಲೋಕ ಅದಾಲತ್ ಮುಂದುವರಿದ ಭಾಗವಾಗಿ ಜನರ ನಡುವೆ ಅಥವಾ ಮನೆಬಾಗಿಲಿಗೆ ಕಾನೂನು ಸೇವೆ ಒದಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮ ಮಟ್ಟದಲ್ಲಿ ಕಾನೂನು ಸೇವೆ ಒದಗಿಸಲಾಗುತ್ತಿದೆ. ಪ್ರಾಧಿಕಾರದ ಸ್ವಯಂಸೇವಕರು, ಮನೆ-ಮನೆಗೆ ಹೋಗಿ ಸಮೀಕ್ಷೆ ಮಾಡಿ ಪ್ರಾಧಿಕಾರಕ್ಕೆ ವರದಿ ನೀಡುತ್ತಾರೆ. ಆನಂತರ ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಅಂದು ಕಂದಾಯ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳನ್ನು ಕರೆಸಿ ಸೇವೆ ಒದಗಿಸಲಾಗುತ್ತದೆ. ಉದಾಹರಣೆಗೆ ಚಾಲನಾ ಪರವಾನಗಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಫೋಡಿ, 11ಇ ನಕ್ಷೆ, ವಿಮೆ, ವಿಧವಾ ವೇತನ, ಅಂಗವಿಕಲರ ಐಡಿ ಕಾರ್ಡ್ ಇನ್ನಿತ್ತರ ಸಣ್ಣ ಸಣ್ಣ ಸಮಸ್ಯೆಗಳಿಗೆ ಸ್ಥಳದಲ್ಲೇ ಬಗೆಹರಿಸಲಾಗುತ್ತದೆ. ಗ್ರಾಮ, ಹೋಬಳಿ ಮಟ್ಟದಲ್ಲಿ ಕ್ಯಾಂಪ್ ಆಯೋಜನೆ ಮಾಡಲಾಗುತ್ತದೆ.

ಕಾನೂನು ದುರ್ಬಳಕೆ ಸಲ್ಲ

‘ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ಹೆಚ್ಚಾಗುತ್ತಿವೆಯಲ್ಲ?’ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಶಶಿಧರ ಶೆಟ್ಟಿ ಅವರು, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಮಾತ್ರ ಸುಳ್ಳು ಕೇಸು ದಾಖಲಿ ಸುತ್ತಾರೆ ಎನ್ನಲಾಗುವುದಿಲ್ಲ. ಎಲ್ಲ ತರಹದ ಕೇಸ್​ನಲ್ಲಿಯೂ ಸುಳ್ಳು ದಾವೆ ದಾಖಲಾಗುತ್ತಿವೆ. ಕೋರ್ಟ್​ನಲ್ಲಿ ವಿಚಾರಣೆ ನಡೆದು ನ್ಯಾಯಾ ಧೀಶರು ಎಲ್ಲವನ್ನೂ ಪರಿಶೀಲಿಸಿ ತೀರ್ಪು ನೀಡುತ್ತಾರೆ. ಪ್ರತಿಯೊಬ್ಬರ ಸಂಸಾರದಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುತ್ತವೆ. ಸಂಸಾರದಲ್ಲೇ ಬಗೆಹರಿಸಿಕೊಂಡು ಜೀವನ ನಡೆಸಬೇಕು.

ಲೋಕ ಅದಾಲತ್ ಹೇಗೆ?

ಲೋಕ ಅದಾಲತ್ ಎಂದರೆ ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳುವ ಪದ್ಧತಿ. ಈಗಾಗಲೇ ಕೋರ್ಟ್ ನಲ್ಲಿ ವ್ಯಾಜ್ಯಗಳು ನಡೆಯುತ್ತಿದ್ದರೆ ಅಂಥ ಪ್ರಕರಣಗಳನ್ನು ವಕೀಲರ ಮೂಲಕ ಅಥವಾ ನೇರವಾಗಿ ಕಾನೂನು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಅದರ ಮೂಲಕ ಲೋಕ ಅದಾಲತ್​ಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ಅಥವಾ, ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಆ ಪ್ರಕರಣ ಲೋಕ ಅದಾಲತ್​ನಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಮನವರಿಕೆಯಾದರೆ ಅವರೇ ವರ್ಗಾವಣೆ ಮಾಡಬಹುದು.

ಲೀಗಲ್ ಕ್ಲಿನಿಕ್

ಹಳ್ಳಿ-ಹಳ್ಳಿಗೂ ಕಾನೂನು ಸೇವೆ ಒದಗಿಸಲಾಗುತ್ತಿದೆ. ಇದಕ್ಕಾಗಿ ತಾಲೂಕು, ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಪ್ರಾಧಿಕಾರದ ಸಮಿತಿ ರಚಿಸಲಾಗಿದೆ. ಜತೆಗೆ ಪ್ರತಿಯೊಂದು ಕಾನೂನು ಕಾಲೇಜುಗಳಲ್ಲಿ ಕಾನೂನು ಸಲಹಾ ಕ್ಲಿನಿಕ್ ತೆರೆಯಲು ಉದ್ದೇಶಿಸಲಾಗಿದೆ. ಪ್ರತಿ ಲೀಗಲ್ ಕ್ಲಿನಿಕ್​ನ ಸದಸ್ಯರಾಗಿರುವ ಕಾನೂನು ವಿದ್ಯಾರ್ಥಿ ಗಳು ಗ್ರಾಮಗಳನ್ನು ದತ್ತು ಪಡೆದು ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸುವಂತೆ ಸೂಚಿಸಲಾಗುತ್ತದೆ. ಈ ಮೂಲಕ ‘ವ್ಯಾಜ್ಯ ಮುಕ್ತ ಗ್ರಾಮ’ ಮಾಡುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. ಈಗಾಗಲೇ 30ರಿಂದ 40 ಕಾಲೇಜುಗಳಲ್ಲಿ ಲೀಗಲ್ ಕ್ಲಿನಿಕ್​ಗಳನ್ನು ಆರಂಭಿಸಲಾಗಿದೆ.

ತ್ವರಿತ ನ್ಯಾಯಕ್ಕೆ ಲೋಕ ಅದಾಲತ್

ಶ್ರೀಧರ್ ಪ್ರಭು, ಕಾನೂನು ಸೇವೆಗಳ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ

ದೇಶದಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಿವೆ. ಕೋರ್ಟ್​ಗಳ ಸಂಖ್ಯೆ ಕಡಿಮೆ ಇವೆ. ಹೀಗಿರುವಾಗ ಪ್ರತಿ ಪ್ರಕರಣವನ್ನೂ ಸಾಕ್ಷ್ಯಾಧಾರದ ಆಧಾರದಲ್ಲಿ ವಿಚಾರಣೆ ನಡೆಸುತ್ತ ಹೋದಾಗ ಸಹಜವಾಗಿಯೇ ನ್ಯಾಯದಾನ ವಿಳಂಬವಾಗುತ್ತದೆ. ನ್ಯಾಯಾಲಯಗಳ ಮೇಲಿನ ಒತ್ತಡ ತಗ್ಗಿಸುವ ಸಲುವಾಗಿಯೇ ಲೋಕ ಅದಾಲತ್​ಗಳನ್ನು ಆಯೋಜಿಸಲಾಗುತ್ತಿದೆ. ಲೋಕ ಅದಾಲತ್​ನಲ್ಲಿ ಎರಡೂ ಪಕ್ಷಗಳ ಕಡೆಯವರೂ ರಾಜೀ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳುವುದರಿಂದ ಕೋರ್ಟ್​ಗಳ ಹೊರೆ ತಗ್ಗುವ ಜತೆಗೆ ಜನರ ಹಣ ಹಾಗೂ ಸಮಯವೂ ಉಳಿಯುತ್ತದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ದೇಶದಲ್ಲೇ ಮೊದಲ ಬಾರಿಗೆ ಇ-ಲೋಕ ಅದಾಲತ್ ನಡೆಸುವ ಮೂಲಕ ಆನ್​ಲೈನ್ ಮೂಲಕವೇ 1,15,593 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು. ಆನಂತರದ ಲೋಕ ಅದಾಲತ್​ಗಳಲ್ಲಿ 2.63 ಲಕ್ಷ, 3.32 ಲಕ್ಷ, 3.88 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು. ಜನರು ಸಾಧ್ಯವಾದಷ್ಟೂ ಲೋಕ ಅದಾಲತ್ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು. ಆಗ ವರ್ಷಾನುಗಟ್ಟಲೆ ನಡೆಯಬಹುದಾದ ವ್ಯಾಜ್ಯ ಒಂದೇ ದಿನದಲ್ಲಿ ಇತ್ಯರ್ಥವಾಗಿಬಿಡುತ್ತದೆ. ಲೋಕ ಅದಾಲತ್​ನ ಮತ್ತೊಂದು ಲಾಭವೇನೆಂದರೆ, ಅಲ್ಲಿ ನೀಡುವ ಪರಿಹಾರ ಅಥವಾ ಆದೇಶಗಳ ವಿರುದ್ಧ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೂ ಅವಕಾಶವಿರುವುದಿಲ್ಲ.

ಕಾನೂನು ಅರಿವು ಅಭಿಯಾನ...

ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ, ಶೇಕಡ 1 ಜನ ಮಾತ್ರ ಉಚಿತ ಕಾನೂನು ಸೇವೆಗಳನ್ನು ಬಯಸಿ ಕಾನೂನು ಸೇವಾ ಪ್ರಾಧಿಕಾರಗಳ ಬಳಿ ಬರುತ್ತಿದ್ದಾರೆ. ಜನರು ಪ್ರಾಧಿಕಾರದ ಬಳಿ ಬರಲು ಯಾವುದೋ ತೊಡಕಿರಬೇಕು ಅಥವಾ ಜನರಿಗೆ ಮಾಹಿತಿಯ ಕೊರತೆ ಇರಬೇಕು ಎಂಬುದನ್ನು ಮನಗಂಡ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ದೇಶದಾದ್ಯಂತ ಕಾನೂನು ಅರಿವು ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿತು. ಜನ ನಮ್ಮ ಬಳಿ ಬರದಿದ್ದರೂ, ನಾವೇ ಅವರ ಬಳಿ ಹೋಗಬೇಕು ಎನ್ನುವುದು ಅಭಿಯಾನದ ಉದ್ದೇಶ. ಅ.2ರಿಂದ ಆರಂಭವಾಗಿರುವ ಅಭಿಯಾನ ನವೆಂಬರ್ 14ರವರೆಗೆ ನಡೆಯಲಿದೆ. ನ.8ರಿಂದ 14ರವರೆಗೆ ಕಾನೂನು ಸೇವೆಗಳ ಸಪ್ತಾಹ ನಡೆಯುತ್ತಿದೆ.