ಮಂಗಳವಾರ ಹಗಲಿಡೀ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸೂರ್ಯನ ದರ್ಶನ ಅಪರೂಪವಾಗಿತ್ತು. ಜನಜೀವನಕ್ಕೆ ಯಾವುದೇ ದೊಡ್ಡ ಮಟ್ಟದ ಅಡಚಣೆಯಾಗದಿದ್ದರೂ, ಸತತವಾಗಿ ಸುರಿದ ಹಗುರ ಮಳೆಯಿಂದಾಗಿ ವಾತಾವರಣದಲ್ಲಿ ತಂಪಾದ ಅನುಭವ ಉಂಟಾಗಿದೆ. 
ನ್ಯೂಸ್

ಕರಾವಳಿಯಾಧ್ಯಂತ ಮೋಡಕವಿದ ವಾತಾವರಣ

Shravan Kumar Nala
ಮಂಗಳೂರು: ಕರಾವಳಿ ಜಿಲ್ಲೆಗಳಾದ್ಯಂತ ಕಳೆದ ಕೆಲವು ದಿನಗಳಿಂದ ಮುಂಗಾರು ಪೂರ್ವ ಮಾರುತಗಳ ಪ್ರಭಾವ ಮುಂದುವರಿದಿದೆ. ಸೋಮವಾರ ರಾತ್ರಿಯಿಡೀ ಸುರಿದ ಜಿಟಿಜಿಟಿ ಮಳೆ, ಮಂಗಳವಾರ ಹಗಲಿಡೀ ಕಂಡುಬಂದ ಮೋಡ ಕವಿದ ವಾತಾವರಣ ಹಾಗೂ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಚದುರಿದಂತೆ ಬಿದ್ದ ಮಳೆ ಇದಕ್ಕೆ ಸಾಕ್ಷಿಯಾಗಿದೆ.
ಬುಧವಾರವೂ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳೂ ಇವೆ. ಆದರೆ, ಮೇ 20ರಿಂದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದ್ದು, ಮೇ 27ರಿಂದ ಅಧಿಕೃತವಾಗಿ ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆ ಲಭ್ಯವಾಗಿದೆ.
*ಪ್ರಮುಖ ಹವಾಮಾನ ಬದಲಾವಣೆಗಳು
ಹವಾಮಾನ ಇಲಾಖೆಯ ವಿಶ್ಲೇಷಣೆಯ ಪ್ರಕಾರ, ಮೇ 20ರಿಂದ ಬಂಗಾಳಕೊಲ್ಲಿಯ ತಮಿಳುನಾಡು ಕರಾವಳಿಯ ಮೂಲಕ ಒಳಬೀಸುತ್ತಿರುವ ಗಾಳಿಯು ಈಶಾನ್ಯ ದಿಕ್ಕಿನ ಕಡೆಗೆ ಚಲಿಸಲಿದೆ. ಈ ಬದಲಾವಣೆಯು ಮುಂಗಾರು ಮಾರುತಗಳ ವ್ಯವಸ್ಥಿತ ಪ್ರಗತಿಗೆ ಪೂರಕ ವಾತಾವರಣವನ್ನು ನಿರ್ಮಿಸಲಿದೆ. ಇದರ ನೇರ ಪರಿಣಾಮವಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಮುಂಗಾರು ಪೂರ್ವ ಮಳೆಯ ಆರ್ಭಟ ಕಡಿಮೆಯಾಗಲಿದೆ.
*ಸಮುದ್ರದ ವಾತಾವರಣ ಮತ್ತು ಎಚ್ಚರಿಕೆ
ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪಿರುವ ಮುಂಗಾರು ಮಾರುತಗಳು ಮುಂದೆ ಚಲಿಸಲು ಸದ್ಯಕ್ಕೆ ಅರಬ್ಬಿ ಸಮುದ್ರದಲ್ಲಿ ಪೂರಕ ಅಥವಾ ಅನುಕೂಲಕರ ವಾತಾವರಣ ನಿರ್ಮಾಣವಾಗಿಲ್ಲ. ಮುಂಗಾರು ಮಾರುತಗಳು ಮತ್ತಷ್ಟು ಚುರುಕಾಗಲು ಹಾಗೂ ಬಲಗೊಳ್ಳಲು ಇನ್ನು ಕೆಲವು ದಿನಗಳ ಕಾಲಾವಕಾಶ ಬೇಕಾಗಬಹುದು.
ಸಮುದ್ರದಲ್ಲಿ ಗಾಳಿಯ ದಿಕ್ಕಿನ ಬದಲಾವಣೆ ಹಾಗೂ ಮುಂಗಾರು ಮಾರುತಗಳ ಚಲನೆಯ ಹಿನ್ನೆಲೆಯಲ್ಲಿ ಕರಾವಳಿ ತೀರದ ಜನರಿಗೆ ಮತ್ತು ಮೀನುಗಾರರಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ಸದ್ಯಕ್ಕೆ ಭಾರಿ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಮೇ 27ರ ಸುಮಾರಿಗೆ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸುವ ಬಲವಾದ ಸಾಧ್ಯತೆಗಳಿರುವುದರಿಂದ, ಮುಂದಿನ ದಿನಗಳಲ್ಲಿ ಹವಾಮಾನದ ಏರಿಳಿತಗಳ ಮೇಲೆ ನಿಗಾವಹಿಸುವುದು ಅಗತ್ಯವಾಗಿದೆ. ಅಲ್ಲಿಯವರೆಗೆ ಕರಾವಳಿಯಲ್ಲಿ ಸಾಧಾರಣ ಹವೆ ಹಾಗೂ ಅಲ್ಲಲ್ಲಿ ಹಗುರವಾದ ತುಂತುರು ಮಳೆ ಮುಂದುವರಿಯಲಿದೆ.
---------------
ಮಂಗಳೂರು ಸುತ್ತಮುತ್ತ ರಾತ್ರಿಯಡಿ ಮಳೆ
ಮುಂಗಾರು ಪೂರ್ವ ಮಾರುತಗಳ ಪ್ರಭಾವದಿಂದ ಕರಾವಳಿ ತೀರಪ್ರದೇಶದ ಸುತ್ತಮುತ್ತ ರಾತ್ರಿಯಿಡಿ ಜಿಟಿಜಿಟಿ ಮಳೆಯಾಗಿದೆ. ಸೋಮವಾರ ತಡರಾತ್ರಿಯಿಂದ ಆರಂಭವಾದ ಜಿಟಿ ಜಿಟಿ ಮಳೆಯು ಮಂಗಳೂರು, ಮೂಲ್ಕಿ, ಉಳ್ಳಾಲ, ಮತ್ತು ಕೋಣಾಜೆ ಸುತ್ತಮುತ್ತಲಿನ ಪರಿಸರದಲ್ಲಿ ರಾತ್ರಿಯಿಡೀ ಎಡೆಬಿಡದೆ ಸುರಿದಿದೆ. ಮಂಗಳವಾರ ಹಗಲಿಡೀ ಸಂಪೂರ್ಣ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸೂರ್ಯನ ದರ್ಶನ ಅಪರೂಪವಾಗಿತ್ತು. ಜನಜೀವನಕ್ಕೆ ಯಾವುದೇ ದೊಡ್ಡ ಮಟ್ಟದ ಅಡಚಣೆಯಾಗದಿದ್ದರೂ, ಸತತವಾಗಿ ಸುರಿದ ಹಗುರ ಮಳೆಯಿಂದಾಗಿ ವಾತಾವರಣದಲ್ಲಿ ತಂಪಾದ ಅನುಭವ ಉಂಟಾಗಿದೆ. ಉಳ್ಳಾಲ ಮತ್ತು ಮೂಲ್ಕಿಯ ಕರಾವಳಿ ತೀರ ಪ್ರದೇಶಗಳಲ್ಲಿ ತಣ್ಣನೆಯ ಗಾಳಿ ಬೀಸುತ್ತಿದ್ದು, ಸಮುದ್ರದ ಅಲೆಗಳ ಅಬ್ಬರವೂ ಕೊಂಚ ಹೆಚ್ಚಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬುಧವಾರ ಸಂಜೆ ಹಾಗೂ ರಾತ್ರಿಯ ವೇಳೆಗೆ ಅಲ್ಲಲ್ಲಿ ಚದುರಿದಂತೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮೇ 20ರ ನಂತರ ಮುಂಗಾರು ಪೂರ್ವ ಮಳೆ ಕಡಿಮೆಯಾಗಲಿದ್ದು, ಮೇ 27ರ ಸುಮಾರಿಗೆ ಅಧಿಕೃತ ಮುಂಗಾರು (ಮಾನ್ಸೂನ್) ಮಾರುತಗಳು ರಾಜ್ಯವನ್ನು ಪ್ರವೇಶಿಸುವ ಲಕ್ಷಣಗಳಿವೆ.
-----------------