Cloudburst: ಜಮ್ಮು-ಕಾಶ್ಮೀರದ ಕಿಶ್ತವಾರ್ ಜಿಲ್ಲೆಯ ಚಶೋತಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ ಕನಿಷ್ಠ 60 ಜನ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 500ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಸಿಎಂ ಓಮರ್ ಅಬ್ದುಲ್ಲಾ ಶುಕ್ರವಾರ(ಆಗಸ್ಟ್ 15) ಹೇಳಿದ್ದಾರೆ.
ಶ್ರೀನಗರದ ಕ್ರೀಡಾಂಗಣದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಮೇಘಸ್ಫೋಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಗಾಯಗೊಂಡವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಮತ್ತು ಮೃತಪಟ್ಟವರ ಶವಗಳನ್ನು ಹೊರ ತೆಗೆಯಲು ಪ್ರಯತ್ನ ನಡೆಯುತ್ತಿದೆ. ಸಂತ್ರಸ್ತ ಜನರಿಗೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದರು.
ಮೇಘಸ್ಫೋಟದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಆಡಳಿತದಲ್ಲಿ ಎಲ್ಲಿ ಲೋಪವಾಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತದೆ. ಅಮೂಲ್ಯ ಜೀವಗಳನ್ನು ಉಳಿಸಲು ಸರ್ಕಾರ ಏನು ಕ್ರಮಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತದೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಕೇಳಿದ್ದು, ಎಲ್ಲಾ ಪರಿಸ್ಥಿತಿ ನಿಯಂತ್ರಿಸಲು ಎಲ್ಲಾ ರೀತಿಯ ಸಹಕಾರ ನೀಡಲು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ನಾನು ಇಂದು ಮಧ್ಯಾಹ್ನ ಕಿಶ್ತ್ವಾರ್‌ಗೆ ತೆರಳುತ್ತೇನೆ. ನಾಳೆ ಮುಂಜಾನೆ ಮೇಘಸ್ಫೋಟದ ದುರಂತದ ಸ್ಥಳಕ್ಕೆ ತೆರಳಿ ಹಾನಿಯ ಪ್ರಮಾಣವನ್ನು ಪರಾಮರ್ಶೆ ಮಾಡ್ತೇನೆ. ರಕ್ಷಣೆ ಕಾರ್ಯಾಚರನೆಗೆ ಬೇಕಾದ ಸಹಾಯವನ್ನು ವ್ಯವಸ್ಥೆ ಮಾಡುತ್ತೇನೆ. ಸಂತ್ರಸ್ತರ ಬೆಂಬಲಕ್ಕೆ ನಿಂತು ಸಹಾಯ ಮಾಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ" ಎಂದು ಸಿಎಂ ಹೇಳಿದ್ದಾರೆ.
ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಪೊಲೀಸರು, ಸೇನೆ ಹಾಗೂ ಸ್ಥಳೀಯ ಸ್ವಯಂಸೇವಕರು ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚಶೋತಿ ಗ್ರಾಮದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಗುಲಾಬ್‌ಗಢ ಪಡ್ಡಾರ್‌ನಲ್ಲಿ ಸರ್ಕಾರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿದೆ. (ಏಜೆನ್ಸೀಸ್)