ಬೆಂಗಳೂರು: ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ನಡೆಸಿದೆ. ಕೇಂದ್ರದ ಮಾರ್ಗಸೂಚಿಯಂತೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದ್ದರೆ, 34 ತಾಲೂಕುಗಳಲ್ಲಿ ಸ್ಥಿತಿ ಚಿಂತಾಜನಕವಾಗಿದ್ದು ಕೇಂದ್ರ ಮಾರ್ಗಸೂಚಿ ಅನ್ವಯಿಸದಿದ್ದರೂ ಈ ತಾಲೂಕುಗಳನ್ನೂ ಸಹ ಪಟ್ಟಿಗೆ ಸೇರಿಸಿ ಒಟ್ಟು 195 ತಾಲೂಕು ಬರ ಎಂದು ಸೆಪ್ಟೆಂಬರ್ ಎರಡನೇ ವಾರ ಘೋಷಿಸಲಾಗಿತ್ತು. ಕಳೆದ ಒಂದು ವಾರದಿಂದೀಚೆಗೆ ಮೋಡ ಕಟ್ಟುವಿಕೆ ಉತ್ತಮ ರೀತಿಯಲ್ಲಿ ಕಂಡುಬಂದಿದೆ. ಹೀಗಾಗಿ ಮೋಡ ಬಿತ್ತನೆ ಮಾಡುವ ಮೂಲಕ ಮಳೆ ಸುರಿಸಿ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಗಳಿಗೆ ಅನುಕೂಲ ಮಾಡಿಕೊಡುವ ಇರಾದೆಯನ್ನು ಸರ್ಕಾರ ಹೊಂದಿದೆ. ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮೋಡ ಬಿತ್ತನೆ ಮಾಡಲು ಎರಡು- ಮೂರು ದಿನಗಳಲ್ಲಿ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಹೇಳಿದರು. ಎರಡು ದಿನಗಳಿಂದ ಬೆಂಗಳೂರು ನಗರ ಹಾಗೂ ಸುತ್ತಾಮುತ್ತ ಸುರಿದ ಮಳೆಯಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಮೋಡ ಬಿತ್ತನೆಯಿಂದ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ನಂಬಿಕೆ ಇದೆ. ಸಚಿವ ಸಂಪುಟ ಸಭೆಯಲ್ಲಿ ಮೋಡ ಬಿತ್ತನೆ ಹಾಗೂ ಕಾವೇರಿ ನೀರು ಸಂಕಷ್ಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.