- ಬೊಜ್ಜು ಬಹುತೇಕರಿಗೆ ಕಾಡುವ ಸಾಮಾನ್ಯ ಸಮಸ್ಯೆ
- ಜಿಮ್, ವ್ಯಾಯಾಮ ಮಾಡದಿದ್ರೇನು? ಮನೆಯಲ್ಲೇ ಮೆಟ್ಟಿಲುಗಳನ್ನು ಹತ್ತಿ-ಇಳಿಯಿರಿ ಸಾಕು
- ಮೆಟ್ಟಿಲುಗಳನ್ನು ಹತ್ತುವ ಮೂಲಕ ಬೊಜ್ಜಿಗೆ ಹೇಳಿ ಗುಡ್ಬೈ
ನವದೆಹಲಿ: ಪ್ರಸ್ತುತ, ಲೈಫ್ಸ್ಟೈಲ್ನಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬುದರಲ್ಲಿ ಅನುಮಾನವೇ ಬೇಡ. ಅದರಲ್ಲೂ, ಇಂದಿನ ಡಿಜಿಟಲ್ ಯುಗದಲ್ಲಿ, ಕುಳಿತಲ್ಲೇ ಕುಳಿತು ಮೊಬೈಲ್ ನೋಡಿಕೊಂಡು ಮುಂದೆ ಸಾಗುವ ಜನತೆಗೆ ಬೊಜ್ಜು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡುವುದು ತೀರ ಸಾಮಾನ್ಯವಾಗಿಬಿಟ್ಟಿದೆ.
ಪ್ರಸ್ತುತ, ಜಿಮ್ ಮತ್ತು ವ್ಯಾಯಾಮ ಈಗ ಕಷ್ಟಸಾಧ್ಯ ಎನ್ನುವಂತಾಗಿದೆ. ಕಾರಣ, ಜಿಮ್ ಉಪಕರಣಗಳು ಬಲು ದುಬಾರಿಯಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸುಲಭವಾದ ಪರಿಹಾರ ಹಾಗೂ ಖರ್ಚಿಲ್ಲದೆಯೇ ಮನೆಯಲ್ಲೇ ಅಥವಾ ಅಪಾರ್ಟ್ಮೆಂಟಿನಲ್ಲಿರುವ ಮೆಟ್ಟಿಲುಗಳನ್ನು ಹತ್ತಿ-ಇಳಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಇದರೊಟ್ಟಿಗೆ ಬೊಜ್ಜಿನ ಸಮಸ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳಬಹುದು.
ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹಕ್ಕೆ ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಕಾರಿ. ಮತ್ತು ಹೃದಯದ ಆರೋಗ್ಯವನ್ನೂ ಸುಧಾರಿಸುತ್ತದೆ. ನಿಯಮಿತ ವಾಕಿಂಗ್ ಅಥವಾ ಜಾಗಿಂಗ್‌ಗೆ ಹೋಲಿಸಿದರೆ ಮೆಟ್ಟಿಲುಗಳನ್ನು ಹತ್ತುವುದು ನಮ್ಮ ಕಾಲುಗಳಿಗೆ ಬಲ ನೀಡುತ್ತದೆ. ಆದ್ದರಿಂದ, ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಇಳಿಸಲು ಇದು ಸರಳ ಮಾರ್ಗ.
ಎಷ್ಟು ನಿಮಿಷ? ಎಷ್ಟು ಪ್ರಯೋಜನ?
ಕೆಲವು ಅಧ್ಯಯನಗಳು, ಸುಮಾರು ಆರು ನಿಮಿಷಗಳ ಕಾಲ ನಿರಂತರವಾಗಿ ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹದ ಕೊಬ್ಬನ್ನು ಕಡಿಮೆ ಮಾಡಬಹುದು ಎಂದು ಸೂಚಿಸಿವೆ. ದಿನಕ್ಕೆ 30 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತಿ-ಇಳಿಯುವುದರಿಂದ 250ರಿಂದ 300 ಕ್ಯಾಲೊರಿಗಳನ್ನು ಕರಗಿಸಬಹುದು. ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯವಿಲ್ಲದವರು ಈ ರೀತಿ ಮನೆಯಲ್ಲೇ ಮೆಟ್ಟಿಲುಗಳನ್ನು ಹತ್ತುವುದನ್ನು ರೂಢಿಸಿಕೊಂಡರೆ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು,(ಏಜೆನ್ಸೀಸ್).