ನಾಗಮಂಗಲ: ಕಳೆದ 14-15 ವರ್ಷಗಳಿಂದಲೂ ನೆಲ ಬಾಡಿಗೆ ಪಾವತಿಸದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಆವರಣದಲ್ಲಿನ ಅನಧಿಕೃತ 29 ಶೆಡ್‌ಗಳನ್ನು ತೆರವುಗೊಳಿಸುವ ಮೂಲಕ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಾಡಿಗೆ ರಹಿತ ವ್ಯಾಪಾರಕ್ಕೆ ತೆರೆಬಿದ್ದಿದೆ.
ಸೋಮವಾರ ಮುಂಜಾನೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪುರಸಭಾ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನವೇ ಕೆಲ ವ್ಯಾಪಾರಸ್ಥರು ಸ್ವತಃ ಅಂಗಡಿ ಖಾಲಿ ಮಾಡುವ ಮತ್ತು ತಾವೇ ತೆರವುಗೊಳಿಸಲು ಮುಂದಾದರು. ಮತ್ತೆ ಕೆಲವರು ಮಧ್ಯಾಹ್ನದವರೆಗೆ ಕಾಲಾವಕಾಶ ಕೇಳಿದರು. ತೆರವುಗೊಳಿಸುವ ವಿಷಯ ತಿಳಿದಿದ್ದ ವ್ಯಾಪಾರಸ್ಥರು ಭಾನುವಾರ ರಾತ್ರಿಯೇ ಅಂಗಡಿಯಲ್ಲಿದ್ದ ಸಾಮಾನುಗಳನ್ನು ಖಾಲಿ ಮಾಡಿದ್ದರು. ಈ ಮಧ್ಯೆ ಸಮಯಾವಕಾಶ ಕೇಳಿದ್ದ ವ್ಯಾಪಾರಸ್ಥರು ನಾವು ತೆರವುಗೊಳಿಸುವುದಿಲ್ಲ ಎಂಬ ನಿರ್ಣಯ ಹೊರಹಾಕಿದರು. ವ್ಯಾಪಾರಸ್ಥರ ನಿಲುವು ತಿಳಿದು ಪ್ರತಿ ಅಂಗಡಿಗಳನ್ನು ಒಂದೊಂದಾಗಿ ನಿಯಮಾನುಸಾರ ವಿಡಿಯೋ ಚಿತ್ರೀಕರಣ ಮಾಡಿಸುವ ಮೂಲಕ ಮುಖ್ಯಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ಎಲ್ಲ 29 ಶೆಡ್‌ಗಳನ್ನು ತೆರವುಗೊಳಿಸಲಾಯಿತು.
ವಿಷಯ ತಿಳಿದು ಸಹಸ್ರಾರು ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದರು. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿಐಎಸ್‌ಪಿ ಲಕ್ಷ್ಮೀ ಜನಾರ್ದನ ಸಾಗರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇದರೊಂದಿಗೆ ನೂತನವಾಗಿ ನಿರ್ಮಾಣಗೊಂಡಿರುವ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿ ಪ್ರಾರಂಭವಾಗಬೇಕಿರುವ ವ್ಯಾಪಾರ ವಹಿವಾಟಿಗೆ ಮೊದಲ ಹಂತದ ಹಸಿರು ನಿಶಾನೆ ದೊರೆತಂತಾಗಿದೆ.