ಸಾಗರ: ತಾಲೂಕಿನ ಭಾರಂಗಿ ಹೋಬಳಿಯ ಕೋಗಾರ್ ಗ್ರಾಮದಲ್ಲಿ ನಾಗರಾಜ ಎಂಬ ರೈತ ಕಂದಾಯ ಭೂಮಿಯಲ್ಲಿ ಬೆಳೆದಿದ್ದ ಶುಂಠಿ ಬೆಳೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡದೆ ತೆರವುಗೊಳಿಸಿದ್ದಾರೆ.
ನಾಗರಾಜ್ ಹಲವು ವರ್ಷಗಳಿಂದ ವಾಸವಿದ್ದು ಕೃಷಿ ಚಟುವಟಿಕೆ ಮಾಡಿಕೊಂಡು ಬಂದಿದ್ದಾರೆ. ಈಚೆಗೆ ಅವರು ತಮ್ಮ ಸ್ವಾಧೀನದಲ್ಲಿರುವ ಜಮೀನಿನಲ್ಲಿ ಶುಂಠಿ ನಾಟಿ ಮಾಡಿದ್ದರು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರವು ಮಾಡಿದ್ದಾರೆ.
ನಾಗರಾಜ್ ಒಂದು ಎಕರೆಯಲ್ಲಿ ಶುಂಠಿ ಬೆಳೆ ಹಾಕಿದ್ದರು. ನಾಲ್ಕೂವರೆ ತಿಂಗಳಿನಿಂದ ಕೃಷಿ ಮಾಡುತ್ತಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಜಮೀನಿಗೆ ನುಗ್ಗಿ ಶುಂಠಿ ಬೆಳೆ ನಾಶ ಮಾಡಿರುವ ಕ್ರಮ ಖಂಡನೀಯ. ಇತ್ತೀಚೆಗೆ ಸಾಗರ ತಾಲೂಕಿನಲ್ಲಿ ರೈತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರೃ ಬಂದು 79 ವರ್ಷವಾದರೂ ರೈತರಿಗೆ ಸ್ವಾತಂತ್ರೃ ಸಿಕ್ಕಿಲ್ಲ. ಫಸಲು ತೆಗೆದುಕೊಳ್ಳುವವರೆಗೆ ಅಧಿಕಾರಿಗಳು ತಾಳ್ಮೆಯಿಂದ ಇರಬೇಕಾಗಿತ್ತು. ಕೆಲವು ದಿನಗಳ ಹಿಂದೆ ಅರಣ್ಯಾಧಿಕಾರಿಗಳಿಂದ ಕೆರೋಡಿ ಭಾಗದಲ್ಲಿ, ಈಗ ಕೋಗಾರ್‌ನಲ್ಲಿ ಕಂದಾಯ ಇಲಾಖೆ ದೌರ್ಜನ್ಯ ಮಾಡಿದೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಒತ್ತಾಯಿಸಿದ್ದಾರೆ.