ಸೂಡಾ ಕಚೇರಿ ಪಕ್ಕದ ರಸ್ತೆಯಲ್ಲಿ ನಿರ್ಮಿಸಿರುವ ಶೆಡ್ ತೆರವಿಗೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕೆ.ವಿ.ವಸಂತಕುಮಾರ್, ಉಮೇಶ್ ಜಾಧವ್, ಸೇತುರಾಮ್, ಜನಮೇಜಿರಾವ್ ಇತರರಿದ್ದರು.  
ನ್ಯೂಸ್

ರಸ್ತೆಯಲ್ಲಿರುವ ಶೆಡ್ ತೆರವುಗೊಳಿಸಿ

ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಪಕ್ಕದಲ್ಲಿ ಸಾರ್ವಜನಿಕರು ಬಳಸುತ್ತಿದ್ದ ರಸ್ತೆಯಲ್ಲಿ ವಾಹನಗಳ ನಿಲುಗಡೆಗಾಗಿ ಶೆಡ್ ನಿರ್ಮಿಸಿರುವುದನ್ನು ತಕ್ಷಣ ತೆರವುಗೊಳಿಸಬೇಕೆಂದು ಒತ್ತಾಯಿಸಿ ಸೋಮವಾರ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಸೂಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಸ್ತೆಯಲ್ಲಿ ಶೆಡ್ ನಿರ್ಮಿಸಿರುವುದು ಕಾನೂನು ಬಾಹಿರ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಶೆಡ್ ತೆರವುಗೊಳಿಸಿಲ್ಲ. ಶಿವಮೊಗ್ಗ ಮಹಾನಗರ ಯೋಜನೆ-2030ರ ನಕ್ಷೆ ಪ್ರಕಾರ ಈ ಶೆಡ್ ನಿರ್ಮಿಸಿರುವ ಜಾಗ ರಸ್ತೆಗೆಂದು ಮೀಸಲಾಗಿದೆ. ನಗರಾಭಿವೃದ್ಧಿ ಕಚೇರಿ ನಿರ್ಮಾಣವಾದ ದಿನದಿಂದಲೂ ಈ ಜಾಗ ಸಾರ್ವಜನಿಕರ ಬಳಕೆಗೆ ಮೀಸಲಾಗಿತ್ತು ಎಂದು ತಿಳಿಸಿದರು.
ಶೆಡ್ ನಿರ್ಮಾಣದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಶಿವಮೊಗ್ಗ ಮಹಾನಗರ ಯೋಜನೆ ಪ್ರಕಾರ ಶೆಡ್ ನಿರ್ಮಾಣ ತಪ್ಪು ಮತ್ತು ಶಿಕ್ಷಾರ್ಹ ಅಪರಾಧ. ನಿರ್ಮಾಣಕ್ಕೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಆಲಿಸಿಲ್ಲ. ಇನ್ನೊಂದು ವಾರದಲ್ಲಿ ಶೆಡ್ ತೆರವು ಮಾಡದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಸತೀಶ್‌ಕುಮಾರ್ ಶೆಟ್ಟಿ, ಪ್ರಮುಖರಾದ ಉಮೇಶ್ ಜಾಧವ್, ಚನ್ನವೀರಪ್ಪ ಗಾಮನಗಟ್ಟಿ, ಸೇತುರಾಮ್, ಜನಮೇಜಿರಾವ್, ಚನ್ನಪ್ಪ, ಚಂದ್ರಶೇಖರ ಗೌಡ, ವೆಂಕಟನಾರಾಯಣ್, ಕೇಶವಮೂರ್ತಿ, ಪ್ರಕಾಶ್, ಕೇಶವ, ದಿಗಂತ ಕುಮಾರ್ ಇತರರಿದ್ದರು.