ನ್ಯೂಸ್

ಜನರ ಆತಂಕ ನಿವಾರಿಸಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಸರ್ಕಾರಿ ಸೇವೆಗಳು ಅದರಲ್ಲೂ ರಾಜ್ಯದ ಕಂದಾಯ ಇಲಾಖೆಯ ಸೇವೆಗಳಿಗೆ ಸಂಬಂಧಿಸಿದಂತೆ ಒಂದಿಲ್ಲ ಒಂದು ಸಮಸ್ಯೆಗಳು ಉದ್ಭವವಾಗುತ್ತಿರುವುದು ಕಳವಳದ ವಿಚಾರ. ಜನರಿಗೆ ಸಮರ್ಪಕವಾಗಿ ಸೌಲಭ್ಯಗಳನ್ನು ಒದಗಿಸಬೇಕಾದ ಇಲಾಖೆಯೇ ಮತ್ತೆಮತ್ತೆ ಸಮಸ್ಯೆ, ಅಪಸವ್ಯಗಳಿಂದ ಸುದ್ದಿಯಾಗುತ್ತಿರುವುದು ಸರಿಯಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ತಂತ್ರಾಂಶಕ್ಕೆ ಸಂಬಂಧಿಸಿದ ದೂರುಗಳ ನಡುವೆಯೇ ಹೊಸದೊಂದು ಸಮಸ್ಯೆ ಸೃಷ್ಟಿಯಾಗಿದ್ದು, ಜನರು ಆತಂಕ ಪಡುವಂತೆ ಮಾಡಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸ್ಥಿರಾಸ್ತಿ ದಸ್ತಾವೇಜುಗಳು ಸೋರಿಕೆಯಾಗಿ ದುಪ್ಪಟ್ಟು ಬೆಲೆಗೆ ಖಾಸಗಿ ವ್ಯಕ್ತಿಗಳು ಬಿಕರಿ ಮಾಡುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಶತಮಾನಗಳಿಂದ ಸಂರಕ್ಷಣೆ ಮಾಡಿರುವ ಕಂದಾಯ ಇಲಾಖೆಯ ಕಡತಗಳಿಗೆ ಕನ್ನ ಹಾಕಿರುವ ಅನುಮಾನ ವ್ಯಕ್ತವಾಗಿದೆ.

ಖಾಸಗಿ ಕಂಪನಿಗಳು, ಆಪ್ ಮತ್ತು ವೆಬ್​ಸೈಟ್​ಗಳನ್ನು ತೆರೆದು ಕಂದಾಯ ಇಲಾಖೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಿಗುವಂತಹ ದಾಖಲೆಗಳನ್ನು ಒದಗಿಸುವಲ್ಲಿ ನಿರತವಾಗಿದ್ದರೂ, ಸರ್ಕಾರ ಈ ಬಗ್ಗೆ ಮೌನವಹಿಸಿರುವುದು ಏಕೆ ಎಂಬುದು ಅರ್ಥವಾಗದ ಸಂಗತಿ. ಸಾಮಾಜಿಕ ಜಾಲತಾಣದಲ್ಲಿ ಈ ಆಪ್ ಕಂಪನಿಗಳು ಜಾಹೀರಾತು ನೀಡುವುದರ ಜತೆಗೆ ಲಿಂಕ್​ಗಳನ್ನು ಕೊಟ್ಟು ಕೇವಲ ಎರಡು ನಿಮಿಷಗಳಲ್ಲಿ ಭೂ ದಾಖಲೆಗಳನ್ನು ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಚಾರ ಮಾಡುತ್ತಿವೆ. ಈ ದಾಖಲೆಗಳು ಎಷ್ಟು ಅಸಲಿ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ, ಬ್ಯಾಂಕ್ ಖಾತೆಯ ವಿವರ ಸೇರಿದಂತೆ ಸುರಕ್ಷಿತವಾಗಿ ಇರಬೇಕಾದ ಮಾಹಿತಿಗಳು, ಕಡತಗಳು ಖಾಸಗಿಯವರ ಕೈಗೆ ಸುಲಭವಾಗಿ ಸೇರುತ್ತಿದ್ದು, ಸರ್ಕಾರಕ್ಕೆ ಬರುವ ಕೋಟ್ಯಂತರ ರೂಪಾಯಿ ಆದಾಯವೂ ಕೈತಪ್ಪಿ ಹೋಗುತ್ತಿದೆ.

ಈ ಗಂಭೀರ ಪ್ರಕರಣವನ್ನು ಗಮನಕ್ಕೆ ತಂದರೂ ಕಂದಾಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು, ಬೇಜವಾಬ್ದಾರಿ ಧೋರಣೆ ತಳೆದಿರುವುದು ಖಂಡನೀಯ. ‘ಏಜೆಂಟ್​ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ’ ಎಂಬ ಅಧಿಕಾರಿಗಳ ಹೇಳಿಕೆ ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಈ ಏಜೆಂಟ್​ಗಳಿಗೆ ಮತ್ತು ಖಾಸಗಿ ವ್ಯಕ್ತಿಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳೇ ಪರೋಕ್ಷ ನೆರವು ನೀಡುತ್ತಿದ್ದಾರೆಯೇ ಎಂಬ ಸಂದೇಹ ಮೂಡದಿರದು. ಅಷ್ಟೇ ಅಲ್ಲ, ಸರ್ಕಾರಿ ಇಲಾಖೆಗಳಲ್ಲಿ ಪದೇಪದೆ ತಾಂತ್ರಿಕ ಸಮಸ್ಯೆ, ಸರ್ವರ್ ಡೌನ್ ಎಂಬ ನೆಪ, ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಳಂಬ ಧೋರಣೆಯಿಂದ ಜನಸಾಮಾನ್ಯರು ರೋಸಿಹೋಗಿದ್ದಾರೆ. ಹೀಗಾಗಿ ತಮ್ಮ ಕೆಲಸವಾದರೆ ಸಾಕು ಎಂಬ ಭಾವನೆಯಲ್ಲಿ ಹೆಚ್ಚು ಶುಲ್ಕ ಭರಿಸಿ ಖಾಸಗಿ ಆಪ್, ವೆಬ್​ಸೈಟ್​ಗಳ ಮೂಲಕ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ಸಂಬಂಧಿಸಿದ ಮತ್ತು ಜನಸಾಮಾನ್ಯರಿಗೆ ಸೇರಿದ ಮಹತ್ವದ ದಾಖಲೆಗಳು ಹೀಗೆ ಖಾಸಗಿಯವರ ಕೈ ಸೇರಿದರೆ, ಅದರಿಂದಾಗುವ ಅಪಾಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇನ್ನಾದರೂ, ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತುಕೊಂಡು, ಏಜೆಂಟ್​ಗಳ ಹಾವಳಿ ನಿಯಂತ್ರಿಸಬೇಕು. ಜನರ ದಾಖಲೆಗಳು ಸುರಕ್ಷಿತವಾಗಿವೆಯೇ, ಅದಕ್ಕೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಕಂದಾಯ ಇಲಾಖೆಯ ಆನ್​ಲೈನ್ ಸೇವೆಗಳು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಕ್ರಮ ಕೈಗೊಳ್ಳಬೇಕು.