ಪಿರಿಯಾಪಟ್ಟಣ: ಗೋಣಿಕೊಪ್ಪ ರಸ್ತೆ ಬದಿ ಸುರಿದಿದ್ದ ಕೋಳಿ ಮಾಂಸ ತ್ಯಾಜ್ಯ ರಾಶಿಯನ್ನು ತಾಲೂಕು ಪಂಚಾಯಿತಿ ಭಾನುವಾರ ತೆರವುಗೊಳಿಸಿದೆ.
ಗೋಣಿಕೊಪ್ಪ ರಸ್ತೆಯಲ್ಲಿರುವ ಪುರಸಭೆ ಸ್ವಾಗತ ಕಮಾನು ಬಳಿ ಕೋಳಿ ಮಾಂಸದ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕಲಾಗುತ್ತಿತ್ತು. ಇದರ ದುರ್ನಾತ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಮೂಗಿಗೆ ಬಡಿಯುತ್ತಿತ್ತು. ಈ ಬಗ್ಗೆ ಅ. 4ರಂದು ವಿಜಯವಾಣಿಯಲ್ಲಿ ‘ಕೋಳಿ ಮಾಂಸ ತ್ಯಾಜ್ಯದಿಂದ ಕಿರಿಕಿರಿ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಜೆಸಿಬಿ ಯಂತ್ರದ ನೆರವಿನಿಂದ ತ್ಯಾಜ್ಯ ತೆರವುಗೊಳಿಸಿದ್ದಾರೆ.
ರಸ್ತೆಯ ಬದಿ ಉದ್ದಕ್ಕೂ ಜಾಗವನ್ನು ಸಮತಟ್ಟು ಮಾಡಿ ಸ್ವಚ್ಛಗೊಳಿಸಿದ್ದಾರೆ. ಕೋಳಿ ಮಾಂಸ ಮಾರಾಟದ ಅಂಗಡಿಯ ಮಾಲೀಕರನ್ನು ಪೊಲೀಸ್ ಠಾಣೆಗೆ ಕರೆಸಿ ಇನ್ನು ಮುಂದೆ ಆ ಸ್ಥಳದಲ್ಲಿ ತ್ಯಾಜ್ಯಗಳನ್ನು ಸುರಿಯದಂತೆ ಎಚ್ಚರಿಕೆ ನೀಡಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ನೆಮ್ಮದಿ ದೊರಕಿದೆ.