ಬೆಂಗಳೂರು: ಮುಡಾ ಅಕ್ರಮದ ತನಿಖೆ ನಡೆಸಿದ ಲೋಕಾಯುಕ್ತ, ಸಿಎಂ ಮತ್ತವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದೆ. ಹಿಂದಿನ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಮುಚ್ಚಿದವರು ಈ ಪ್ರಕರಣದಲ್ಲಿ ಶುದ್ಧರಾಗಿ ಹೊರಹೊಮ್ಮಿ ಹೊಮ್ಮಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಟೀಕಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಮುಡಾ ನಿವೇಶನಗಳ ಹಂಚಿಕೆ ಬಹು ಕೋಟಿ ರೂ.ಗಳ ಅವ್ಯವಹಾರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ, ತಾಂತ್ರಿಕ ಪರಿಣತರ ಸಮಿತಿ ವರದಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ.
ಪ್ರಕರಣದ ತನಿಖೆಗೆ ಹೈಕೋರ್ಟ್ ಅಸ್ತು ಎಂದ ಮೇಲೆ ಸಿಎಂ ಪತ್ನಿ 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಇಷ್ಟೆಲ್ಲ ಆದ ಮೇಲೂ ನಿರೀಕ್ಷೆಯಂತೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದ್ದು, ಅಕ್ರಮ ಆಗಿಲ್ಲ ಎನ್ನುವುದಾದರೆ ಪ್ರಕರಣದ ತನಿಖೆ ಸಿಬಿಐಗೆ ನೀಡಲಿ ಎಂದು ರವಿಕುಮಾರ್ ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಮುಡಾ ನಿವೇಶನಗಳ ಹಂಚಿಕೆ ಅಕ್ರಮದ ಬಗ್ಗೆ ತನಿಖೆ ನಡೆಸಿದ ಲೋಕಾಯುಕ್ತ, ಸಿಎಂ ಮತ್ತವರ ಕುಟುಂಬಕ್ಕೆ ಕ್ಲೀನ್‌ಚಿಟ್ ನೀಡಿರುವುದು ದುರದೃಷ್ಟಕರ ಎಂದರು.
ಸಾವಿರಾರು ಕೋಟಿ ರೂ.ಗಳ ಮೌಲ್ಯದ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ಸರ್ಕಾರವೇ ಒಪ್ಪಿದೆ. ಹಾಗಿದ್ದ ಮೇಲೂ ಇದ್ದ ಮೂವರಲ್ಲಿ ಕದ್ದವರು ಯಾರು ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
ಸಿಎಂ ಪತ್ನಿ 14 ನಿವೇಶನಗಳನ್ನು ಹಿಂತಿರುಗಿಸಿದ್ದೇಕೆ ? ಎಂದು ಕೇಳಿದ ಸಿ.ಟಿ.ರವಿ, ಹಿಂದಿನ ಎಸಿಬಿ ದಾರಿಯಲ್ಲಿ ಲೋಕಾಯುಕ್ತ ಹೆಜ್ಜೆಯಿಟ್ಟಿದ್ದು, ಸಮಗ್ರ ತನಿಖೆಯಾಗಿಲ್ಲ ನೇರವಾಗಿ ಆರೋಪಿಸಿದರು.