ನ್ಯೂಸ್

ಖ್ಯಾತ ಹಿಂದೂಸ್ತಾನಿ ಗಾಯಕ ರಾಜನ್ ಮಿಶ್ರಾ ಕೋವಿಡ್​ ಸೋಂಕಿನಿಂದ ನಿಧನ

ವಾರಣಾಸಿ: ದೇಶದ ಪ್ರಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ರಾಜನ್ ಮಿಶ್ರಾ ಅವರು ಮಾರಕ ಕೋವಿಡ್19 ಸೋಂಕಿನಿಂದ ಇಂದು ಸಂಜೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಕಳೆದ ಐದು ದಿನದ ಹಿಂದೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತ ಕೂಡ ಆಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರು ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಮೃತರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಸಂಗೀತ ವಲಯ ಕಂಬನಿ ಮಿಡಿದಿದೆ. ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಪ್ರಧಾನಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ರಾಜನ್ ಮಿಶ್ರಾ ಅವರು ತಮ್ಮ ಸಹೋದರ ಸಾಜನ್ ಮಿಶ್ರಾ ಅವರೊಡನೆ ದೇಶ ಹಾಗೂ ವಿದೇಶದಲ್ಲಿ ಅಪಾರ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನಮನಸೋರೆಗೊಂಡಿದ್ದರು. 1951 ರಲ್ಲಿ ವಾರಣಾಸಿಯ ಸಂಗೀತ ವಿದ್ವಾಂಸರ ಕುಟುಂಬದಲ್ಲಿ ರಾಜನ್ ಮಿಶ್ರಾ ಜನಿಸಿದ್ದರು.