ಗೋರಖ್‌ಪುರದಲ್ಲಿ ಸಮಾಜವಾದಿ ಪಕ್ಷದ ಸುದ್ದಿಗೋಷ್ಠಿ ವೇಳೆ ಸೀಟಿನ ವಿಚಾರಕ್ಕೆ ಕಿರಿಕ್​ 
ನ್ಯೂಸ್

ಸೀಟಿಗಾಗಿ ಕಿರಿಕ್​; ಮಾಜಿ ಜಿಲ್ಲಾಧ್ಯಕ್ಷನಿಗೆ ಕಪಾಳಮೋಕ್ಷ! ಸಮಾಜವಾದಿ ಪಕ್ಷದ ಸಭೆಯಲ್ಲಿ ಹೈಡ್ರಾಮಾ | Samajwadi Party

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸುದ್ದಿಗೋಷ್ಠಿ ವೇಳೆ ಸೀಟಿನ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಾಜಿ ಜಿಲ್ಲಾಧ್ಯಕ್ಷ ನಾಗಿನಾ ಸಹಾನಿಗೆ ಕಪಾಳಮೋಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Gorakhpur: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸಮಾಜವಾದಿ ಪಕ್ಷದ ಸುದ್ದಿಗೋಷ್ಠಿ ವೇಳೆ ಸೀಟಿನ ವಿಚಾರಕ್ಕೆ ಎರಡು ಬಣಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ನಾಗಿನಾ ಸಹಾನಿಗೆ ಕಪಾಳಮೋಕ್ಷ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶನಿವಾರ ಮಧ್ಯಾಹ್ನ ಜರ್ನಲಿಸ್ಟ್ಸ್ ಪ್ರೆಸ್ ಕ್ಲಬ್‌ನಲ್ಲಿ ಎಸ್‌ಪಿ ಜಿಲ್ಲಾಧ್ಯಕ್ಷ ಬೃಜೇಶ್ ಗೌತಮ್ ಸುದ್ದಿಗೋಷ್ಠಿ ಕರೆದಿದ್ದರು. ಅಕ್ಟೋಬರ್ 2ರಿಂದ 8ರವರೆಗೆ ನಡೆಯುತ್ತಿರುವ ‘ಲೋಕತಂತ್ರ ಬಚಾವೋ ಸಪ್ತಾಹ’ ಅಭಿಯಾನದ ಕುರಿತು ಮಾಹಿತಿ ನೀಡಲು ಈ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು.

2027ರ ವಿಧಾನಸಭೆ ಚುನಾವಣೆಯಲ್ಲಿ ಗೋರಖ್‌ಪುರ ಗ್ರಾಮೀಣ ಕ್ಷೇತ್ರದಿಂದ ಎಸ್‌ಪಿ ಟಿಕೆಟ್ ಬಯಸಿರುವ ಅನುಮಾನ್ಸಿಂಗ್ ಬೆಂಬಲಿಗರು ಹಾಗೂ ನಾಗಿನಾ ಸಹಾನಿ ನಡುವೆ ಸೀಟಿನ ವಿಚಾರಕ್ಕೆ ವಾಗ್ವಾದ ಶುರುವಾಗಿದೆ. ಬಳಿಕ ಪರಿಸ್ಥಿತಿ ಕೈಮೀರಿ ಗಲಾಟೆ ನಡೆದಿದ್ದು, ಅನುಮಾನ್ಸಿಂಗ್ ಪುತ್ರ ಕಮ್ಲೇಶ್ ಸಿಂಗ್ ಸಹಾನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಮುಖಂಡರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ಬೇರ್ಪಡಿಸಿದ್ದಾರೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಅನುಮಾನ್ಸಿಂಗ್, ತಮ್ಮ ಹೆಸರಿಗೆ ಧಕ್ಕೆ ತರಲು ವಿವಾದ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ನಾಗಿನಾ ಸಹಾನಿ, ಅನುಮಾನ್ಸಿಂಗ್ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲವರು ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಸ್ಥಳಕ್ಕೆ ಬಂದಿದ್ದರು ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಪ್ರತಿಭಟನಾಕಾರರ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ! | Rahul Gandhi

ಈ ವಿಚಾರವನ್ನು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಗಮನಕ್ಕೆ ತಂದು, ಪಕ್ಷದ ನಾಯಕತ್ವ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದು ಜಿಲ್ಲಾಧ್ಯಕ್ಷ ಬೃಜೇಶ್ ಗೌತಮ್ ಹೇಳಿದ್ದಾರೆ. ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಎಸ್‌ಪಿ ನಾಯಕಿ ಕಾಜಲ್ ನಿಷಾದ್, ಪಕ್ಷದ ಕಾರ್ಯಕರ್ತರು ಸಂಯಮ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್)