ನ್ಯೂಸ್

ಜೈಲಿನಲ್ಲಿ ಕೈದಿಗಳ ಮಾರಾಮಾರಿ

Dakshina Kannada

ಮಂಗಳೂರು: ನಗರದ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ಮಾರಾಮಾರಿ ನಡೆದು ಇಬ್ಬರು ಕೈದಿಗಳು ಗಾಯಗೊಂಡಿದ್ದಾರೆ. ಜಗಳ ಬಿಡಿಸಲು ಮುಂದಾದ ಜೈಲು ಸಿಬ್ಬಂದಿ ಗಾಯಗೊಂಡಿದ್ದು, ಪೊಲೀಸ್ ಕರ್ತವ್ಯಕ್ಕೂ ಅಡ್ಡಿಪಡಿಸಿದ ಘಟನೆ ನಡೆದಿದೆ.

ಪಣಂಬೂರು ಪೊಲೀಸರು ಬಂಧಿಸಿದ್ದ ದರೋಡೆ ಪ್ರಕರಣದ ಆರೋಪಿ ಸಮೀರ್ ಬೆಳಗ್ಗೆ ಉಪಾಹಾರ ವಿತರಣೆ ಸಂದರ್ಭ ಮೂಲ್ಕಿ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿ ಅನ್ಸಾರ್ ಹಾಗೂ ದರೋಡೆ ಪ್ರಕರಣದಲ್ಲಿ ಮೂಡುಬಿದಿರೆ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ಜೈನುದ್ದೀನ್ ಮೇಲೆ ಸ್ಟೀಲ್ ಚಮಚ ಮತ್ತು ಇತರ ಅಡುಗೆ ಮನೆ ಸಾಮಗ್ರಿಗಳಿಂದ ಹಲ್ಲೆ ನಡೆಸಿದ. ಅನ್ಸಾರ್‌ನ ಕೈ ಮತ್ತು ಕಾಲಿಗೆ, ಜೈನುದ್ದೀನ್‌ನ ಭುಜ ಮತ್ತು ಬೆನ್ನಿಗೆ ಗಾಯವಾಗಿದೆ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಡೆದಾಟದ ಸಂದರ್ಭ ಬಿಡಿಸಲು ಹೋದ ಜೈಲು ಸಿಬ್ಬಂದಿ ಮೇಲೆಯೂ ಹಲ್ಲೆ ನಡೆದಿದೆ. ಆ ಬಳಿಕ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಸಿಬ್ಬಂದಿ ಜತೆ ಜೈಲಿಗೆ ಆಗಮಿಸಿದ್ದಾರೆ. ಈ ಸಂದರ್ಭ ಪೊಲೀಸರ ಮೇಲೂ ಸಮೀರ್ ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆದು ಹಲ್ಲೆಗೆ ಯತ್ನಿಸಿದ್ದಾನೆ. ಆತನ ಕೊಠಡಿಯಲ್ಲಿದ್ದ ಇತರ ವಿಚಾರಣಾಧೀನ ಕೈದಿಗಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಈ ಹಿಂದೆಯೂ ನಡೆದಿತ್ತು ಗಲಾಟೆ: ಮಂಗಳೂರು ಕಾರಾಗೃಹದಲ್ಲಿ ವಿಚಾರನಾಧೀನ ಕೈದಿಗಳ ನಡುವಿನ ಮಾರಾಮಾರಿ ಹೊಸತಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಘರ್ಷಣೆಗಳು ನಡೆದಿವೆ. 2015ರಲ್ಲಿ ಜೈಲಿನ ಒಳಗೆ ಡಬಲ್ ಮರ್ಡರ್ ಕೂಡ ನಡೆದಿತ್ತು. ಜೈಲಿನೊಳಗೆ ನಿಷೇಧಿತ ವಸ್ತುಗಳಾದ ಮೊಬೈಲ್, ಚೂರಿ, ಗಾಂಜಾ ಮೊದಲಾದ ವಸ್ತುಗಳು ಪೂರೈಕೆಯಾಗುತ್ತಿವೆ ಎನ್ನುವ ಆರೋಪವೂ ಇದೆ. ಈ ಹಿಂದೆ ಪೊಲೀಸರು ತಪಾಸಣೆ ನಡೆಸಿದಾಗ ನಿಷೇಧಿತ ವಸ್ತುಗಳು ಜೈಲಿನೊಳಗಡೆ ಪತ್ತೆಯಾಗಿದ್ದವು.

ಕಾರಾಗೃಹದಲ್ಲಿ ಮಾರಾಮಾರಿ ಘಟನೆ ಸಂಬಂಧ ಜೈಲು ಅಧಿಕಾರಿಗಳು ಹಾಗೂ ಗಾಯಾಳುಗಳಿಂದ ದೂರು ಪಡೆದು ತನಿಖೆ ನಡೆಸಲಾಗುವುದು. ಪೊಲೀಸರ ಕರ್ತವ್ಯಕ್ಕೂ ಅಡ್ಡಿ ಉಂಟಾಗಿದೆ. ಘಟನೆಯಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎನ್ನುವುದನ್ನು ಪತ್ತೆ ಮಾಡಲಾಗುವುದು.

- ಎನ್.ಶಶಿಕುಮಾರ್ ಪೊಲೀಸ್ ಆಯುಕ್ತ, ಮಂಗಳೂರು