ನ್ಯೂಸ್

ಕುಲಕಸುಬು ಅವಲಂಬಿತರ ವಿಶೇಷ ಅಧ್ಯಯನ; ಸಿಎಂ ಸಿದ್ದರಾಮಯ್ಯ ಭರವಸೆ

ಮೃತ್ಯುಂಜಯ ಕಪಗಲ್

ಬೆಂಗಳೂರು: ಆಧುನಿಕತೆಯ ಅಬ್ಬರ, ಬ್ರ್ಯಾಂಡಿಂಗ್ ಟ್ರೆಂಡ್‌ನ ನಡುವೆ ಕುಲ ಕಾಯಕ ನೆಚ್ಚಿಕೊಂಡ ವರ್ಗಗಳ ಕಾಯಕಲ್ಪಕ್ಕೆ ವಿಶೇಷ ಅಧ್ಯಯನ ನಡೆಸಲು ಸಮಿತಿ ರಚಿಸುವೆ ಎಂದು ಸ್ವಾಮೀಜಿಗಳ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳ 20ಕ್ಕೂ ಹೆಚ್ಚು ಮಠಾಧೀಶರ ನಿಯೋಗ ಶುಕ್ರವಾರ ಭೇಟಿ ಮಾಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ಮನವಿಪತ್ರ ಸಲ್ಲಿಸಿತು.

ವಿಜ್ಞಾನ, ತಂತ್ರಜ್ಞಾನ, ಹೊಸ ಆವಿಷ್ಕಾರಗಳು. ಆಧುನಿಕ ಮಾರುಕಟ್ಟೆ, ಜೀವನಶೈಲಿ ಬದಲಾವಣೆ ನಡುವೆ ಕುಲಕಸುಬು ನೆಚ್ಚಿಕೊಂಡ ಸಮುದಾಯಗಳು, ಕುಟುಂಬಗಳು ಗಮನಾರ್ಹವಾಗಿವೆ.

ಕಂಬಾರಿಕೆ, ಚಮ್ಮಾರಿಕೆ, ಕಮ್ಮಾರಿಕೆ, ಕುರಿಗಾರರು, ಹಡಪದರು ಮುಂತಾದ ಕಾಯಕಗಳ ಮುಖೇನ ಬದುಕಿನ ಬಂಡಿ ತಳ್ಳುವವರು ಕಡುಕಷ್ಟದಲ್ಲಿದ್ದಾರೆ.

ಕುಲ ವೃತ್ತಿಗಳಿಗೆ ಉತ್ತೇಜನ, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಹೆಚ್ಚಿನ ಸಬ್ಸಿಡಿ, ಪ್ರೋತ್ಸಾಹಕಗಳನ್ನು ನೀಡಿದರೆ ಈ ವಸ್ತುಗಳ ವಹಿವಾಟು ಹೆಚ್ಚಲಿದೆ. ಇದಕ್ಕಾಗಿ ಸ್ಥೂಲವಾದ ಅಧ್ಯಯನ ನಡೆಸಲು ವಿಶೇಷ ಸಮಿತಿ ರಚಿಸುವ ಅಗತ್ಯವಿದೆ ಎಂದು ನಿಯೋಗ ವಿವರಿಸಿದೆ.

ಎಲ್ಲವನ್ನೂ ಆಲಿಸಿದ ಸಿದ್ದರಾಮಯ್ಯ, ವಿಶೇಷ ಅಧ್ಯಯನ ಸಮಿತಿ ರಚನೆಗೆ ಸಹಮತಿಸಿದೆ. ಕುಲ ಕಸುಬು ಕ್ಷೇತ್ರ ಕಾರ್ಯ ಮಾಡಿದವರು, ಸಾಮಾಜಿಕ, ಆರ್ಥಿಕ ತಜ್ಞರು, ಅಧಿಕಾರಿಗಳನ್ನು ಸಮಿತಿಗೆ ಸೇರಿಸಿ ಅಧ್ಯಯನದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಆಶ್ವಾಸನೆ ನೀಡಿದರು.

ವಸ್ತುಸ್ಥಿತಿ ವಿವರಣೆ

ಇದಕ್ಕೂ ಮುನ್ನ ಹಲವು ಮಠಾಧೀಶರು ಮಾತನಾಡಿ ಶೋಷಿತರು ಹಾಗೂ ಹಿಂದುಳಿದವರ ಏಳಿಗೆಗೆ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿ, ನೆರವು ನೀಡಲು ಪ್ರಯತ್ನಿಸುತ್ತಿದೆ. ವಾಸ್ತವಿಕವಾಗಿ ಪರಿಸ್ಥಿತಿ ಭಿನ್ನವಾಗಿದ್ದು, ಯೋಜನೆಗಳಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.

ದಮನಿತರು, ಸಮುದಾಯದ ಕಟ್ಟಕಡೆಯ ವ್ಯಕ್ತಿ ಆರ್ಥಿಕವಾಗಿ ಸಬಲನಾದರೆ ಶಿಕ್ಷಣ, ಆರೋಗ್ಯ ಮತ್ತಿತರ ಸವಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಸೇರಲು ಅನುಕೂಲವಾಗುತ್ತದೆ.

ಮಠಗಳ ಸಾಮಾಜಿಕ, ಶೈಕ್ಷಣಿಕ ಸೇವೆಗಳು, ಸಮುದಾಯ ಭವನಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ನೆರವು ನೀಡಲು ನಿಯೋಗ ನಿವೇದಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಭೋವಿಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿ, ಕನಕಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಅಮೀಜಿ, ನಾರಾಯಣಗುರು ಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಹಡಪದ ಅಪ್ಪಣ್ಣ ಗುರುಪೀಠದ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಛಲವಾದಿ, ಕೇತೇಶ್ವರ ಹಾಗೂ ಬಂಜಾರ ಶ್ರೀಗಳು ಇದ್ದರು.