ನ್ಯೂಸ್

ಮೋಸ ಹೋದಲ್ಲಿ ಹಕ್ಕು ಚಲಾಯಿಸಿ: ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರ ರಕ್ಷಣೆಗಿವೆ ಹಲವು ಹಕ್ಕುಗಳು

ಮೋಸ ಹೋದಲ್ಲಿ ಹಕ್ಕು ಚಲಾಯಿಸಿ...

- ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರ ರಕ್ಷಣೆಗಿವೆ ಹಲವು ಹಕ್ಕುಗಳು

ಪವಿತ್ರಾ ಕುಂದಾಪುರ ಬೆಂಗಳೂರು

ಸದ್ಯದ ಪರಿಸ್ಥಿತಿಯಲ್ಲಿ ಪ್ರತಿಯೊಂದು ಉತ್ಪನ್ನ, ವಸ್ತುವಿನಲ್ಲೂ ಕಳಪೆ ಹಾಗೂ ಕಲಬೆರಕೆ ದಂಧೆ ಮಿತಿಮೀರಿದೆ. ಜನರ ಅಗತ್ಯ ಹಾಗೂ ಬೇಡಿಕೆಯನ್ನೇ ಆಧರಿಸಿ ಮಾರಾಟಗಾರರು ತರಹೇವಾರಿಯಾಗಿ ವಂಚನೆ ಮಾಡುತ್ತಿದ್ದಾರೆ. ಸೇವಾನ್ಯೂನ್ಯತೆ, ಕಳಪೆ ಉತ್ಪನ್ನ ಸೇರಿ ಯಾವುದೇ ರೀತಿಯಾಗಿ ಮೋಸ ಹೋದಲ್ಲಿ ಕಾನೂನಿನ ಮೊರೆಹೋಗಬಹುದು. ಇದಕ್ಕಾಗಿ ದೇಶದಲ್ಲಿ ಮೊದಲ ಬಾರಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು 1986ರಲ್ಲಿ ಅಂಗೀಕರಿಸಲಾಯಿತು.

ಇದರನ್ವಯ ಗ್ರಾಹಕರ ದೂರುಗಳನ್ನು ಆಲಿಸಲು ಗ್ರಾಹಕ ಆಯೋಗ ಅಥವಾ ಗ್ರಾಹಕ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. 2022 ಜ.1ರಿಂದ 2024 ಅ.31ರವರೆಗೆ ದೇಶಾದ್ಯಂತ 70,403 ದೂರುಗಳು ಸಲ್ಲಿಕೆಯಾಗಿವೆ. ಇದರಲ್ಲಿ 22,276 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು 9017 ದೂರುಗಳು ದಾಖಲಾಗಿದ್ದು, ಇದರಲ್ಲಿ 787 ದೂರುಗಳು ಇತ್ಯರ್ಥವಾಗಿವೆ. ಹೆಚ್ಚು ದೂರುಗಳು ದಾಖಲಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. 8687 ದೂರುಗಳು ದಾಖಲಾಗಿದ್ದು, ಇದರಲ್ಲಿ 2590 ದೂರು ಇತ್ಯರ್ಥವಾಗಿವೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿ ಕೊಟ್ಟಿದೆ.

ದೂರು ಹೇಗೆ, ಯಾರಿಗೆ ಕೊಡಬೇಕು?

ಸೇವಾನ್ಯೂನ್ಯತೆ ಅಥವಾ ಕಳಪೆ ಉತ್ಪನ್ನ ಮಾರಾಟ ಮಾಡಿದಾಗ ನೇರವಾಗಿ ಗ್ರಾಹಕ ಆಯೋಗಕ್ಕೆ ದೂರು ಕೊಡಬಹುದು. ವಕೀಲರ ವಕಾಲತ್ತು ವಹಿಸಬೇಕೆಂಬ ನಿಯಮವೇನು ಇಲ್ಲ. ಮೋಸ ಹೋದ ಗ್ರಾಹಕನೇ ಪಾರ್ಟಿ ಇನ್ ಪರ್ಸನ್ ಆಗಿ ವಾದ ಮಂಡಿಸಬಹುದು. ಇದಲ್ಲದೆ ಗ್ರಾಹಕರು ತಮ್ಮ ದೂರುಗಳನ್ನು ವರದಿ ಮಾಡಲೆಂದೇ ಗ್ರಾಹಕ ವ್ಯವಹಾರಗಳ ಇಲಾಖೆ ಐಘೆಎ್ಕಅ (ಇಂಗ್ರಾಮ್) ಹೆಸರಿನ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪೋರ್ಟಲ್ ಸ್ಥಾಪಿಸಿದೆ.

ನೀವೂ ಸ್ಮಾರ್ಟ್ ಗ್ರಾಹಕರಾಗಿ...

ಜಿಎಸ್1 ಗ್ಲೋಬಲ್ ವೆಬ್‌ಸೈಟ್ ಸಹಯೋಗದಲ್ಲಿ ಉತ್ಪನ್ನದ ಬಾರ್ ಕೋಡ್ ಸ್ಕ್ಯಾನ್ ಮಾಡಲು ಮತ್ತು ಉತ್ಪನ್ನದ ಹೆಸರು, ತಯಾರಕರ ವಿವರಗಳು, ವರ್ಷ ಮತ್ತು ಉತ್ಪನ್ನದ ಸಮಗ್ರ ವಿವರಗಳನ್ನು ಗ್ರಾಹಕರೇ ಪಡೆಯಲು ಸ್ಮಾರ್ಟ್ ಗ್ರಾಹಕ ಎಂಬ ಮೊಬೈಲ್ ಅಪ್ಲಿಕೇಶನ್ ರೂಪಿಸಿದೆ. ಉತ್ಪನ್ನದಲ್ಲಿ ಯಾವುದೇ ದೋಷವಿದ್ದಲ್ಲಿ ದೂರು ನೀಡಲು ವಿವರಗಳನ್ನು ಪಡೆದುಕೊಳ್ಳಲು ಇದು ಸಹಕಾರಿಯಾಗಿದೆ. ಗ್ರಾಹಕ ಸಂಬಂಧಿತ ದೂರುಗಳನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಲು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆ್ ಇಂಡಿಯಾ ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್ ಗ್ರಾಹಕ ಮಧ್ಯಸ್ಥಿಕೆ ಕೇಂದ್ರ ಸ್ಥಾಪಿಸಲಾಗಿದೆ.

ದಾಖಲೆ ಸಂಗ್ರಹ ಮರೆಯಬೇಡಿ

ಗ್ರಾಹಕರು ದೂರು ಸಲ್ಲಿಸಬೇಕಾದರೆ ಸಂಬಂಧಿತ ಸೇವೆ ಅಥವಾ ಉತ್ಪನಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯ ದಾಖಲೆಗಳಿರಬೇಕು. ಆದ್ದರಿಂದ ಉತ್ಪನ್ನ ಖರೀದಿಗೆ ಸಾಕ್ಷ್ಯವಾಗಿ ಬಿಲ್ ಇರಲೇಬೇಕು. ಜತೆಗೆ ಇ ಮೇಲ್, ೆಟೋ, ವಿಡಿಯೋಗಳಿದ್ದರೂ ಸಂಗ್ರಹಿಸಿಡುವುದು ಸೂಕ್ತ. ಜಿಲ್ಲೆ, ರಾಜಜ್ಯ ಹಾಗೂ ರಾಷ್ಟ್ರೀಯ ಹಂತದಲ್ಲಿ ದೂರು ಸಲ್ಲಿಸಬಹುದು.

ಇವುಗಳನ್ನು ಗಮನಿಸಿ

- ಖರೀದಿಗೆ ಮೊದಲು ಉತ್ಪನ್ನದ ಮೇಲೆ ಐಎಸ್‌ಐ/ಅಗ್ಮಾಮಾರ್ಕ್/ಹಾಲ್‌ಮಾರ್ಕ್ ಲೇಬಲ್

- ಯಾವುದೇ ರೀತಿಯ ದೋಷವಿದ್ದಲ್ಲಿ ಗ್ರಾಹಕ ಆಯೋಗಕ್ಕೆ ದೂರು ಕೊಡಬೇಕು

- ಕಳಪೆ ಉತ್ಪನ್ನ ಅಥವಾ ಕಳಪೆ ಗುಣಮಟ್ಟದ ಸೇವೆ ಇದ್ದಲ್ಲಿ ತಾವು ಕೊಟ್ಟ ಹಣ ಮರಳಿ ಪಡೆಯುವ ಹಕ್ಕು ಇದೆ

- ಮಾರಾಟಗಾರ.ಪೂರೈಕೆದಾರನ ನಿರ್ಲಕ್ಷ್ಯದಿಂದಾದ ದೈಹಿಕ ಹಾನಿ, ಆರ್ಥಿಕ ನಷ್ಟಕ್ಕೆ ಪರಿಹಾರ ಕೊಡಬೇಕು

ದೂರಿನ ವಿಚಾರಣೆ ಹೇಗಿರುತ್ತೆ?

ನ್ಯಾಯಾಲಯ ವಿಚಾರಣೆ ನಿಗದಿಪಡಿಸಿ ಅನ್ಯಾಯದ ಕುರಿತು ಗ್ರಾಹಕರ ಅಳಲು ಆಲಿಸುತ್ತದೆ. ನಂತರ ಸೇವಾ ಪೂರೈಕೆದಾರರಿಗೆ ಅಥವಾ ಮಾರಾಟಗಾರರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡುತ್ತದೆ. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನಂತರ ಗ್ರಾಹಕ ವೇದಿಕೆ ನಿರ್ಧಾರ ಪ್ರಕಟಿಸುತ್ತದೆ.