ರಾಮನಗರ : ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ತರವಾದುದು. ಕಲೆ, ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಾ ಕಲಾ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ಹೇಳಿದರು.ಸಂಸ್ಕೃತಿ ಸೌರಭ ಟ್ರಸ್ಟ್ ನಗರದ ಶ್ರೀ ಕೃಷ್ಣಸ್ಮತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 14ನೇ ವರ್ಷದ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜು ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ವಹಿತಾಸಕ್ತಿಗಾಗಿ ಹುಟ್ಟಿಕೊಳ್ಳುತ್ತಿರುವ ಟ್ರಸ್ಟ್‌ಗಳು ಹೆಚ್ಚಾಗಿದ್ದು, ಕೇವಲ ವ್ಯಾಪಾರಿ ಮನೋಭಾವ ಹೊಂದುತ್ತಿವೆ. ಆದರೆ ಅಲ್ಲಲ್ಲಿ ಬೆರಳಣಿಕೆಯ ಕೆಲವು ಟ್ರಸ್ಟ್‌ಗಳು ಸಮಾಜಮುಖಿಯಾಗಿ ನಿಸ್ವಾರ್ಥದಿಂದ ಕೆಲಸ ಮಾಡುತ್ತಿವೆ. ಆ ನಿಟ್ಟಿನಲ್ಲಿ ಸಂಸ್ಕೃತಿ ಸೌರಭ
ಟ್ರಸ್ಟ್‌ನ ನಿರಂತರ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಸಂಸ್ಕೃತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಸತೀಶ್, ನಮ್ಮಲ್ಲಿ ಅನೇಕ ಪ್ರತಿಭಾವನ್ವಿತ ಕಲಾವಿದರಿದ್ದಾರೆ. ಆದರೆ ಅವರ ಪ್ರತಿಭೆ ಹೊರತರುವಲ್ಲಿ ಮಾಧ್ಯಮಗಳು ಬಹಳ ಮುಖ್ಯ. ಎಷ್ಟೋ ಕಲಾವಿದರು ಎಲೆಮರೆ ಕಾಯಿಯಂತೆ ಇರುತ್ತಾರೆ. ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಜತೆೆಗೆ ಸಮಾಜಮುಖಿಯಾಗಿ ಕೆಲಸ ಮಾಡುವಲ್ಲಿ ಇಂತಹ ಪುರಸ್ಕಾರಗಳು ಪ್ರೇರಣೆ ನೀಡುತ್ತವೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ಮಾತನಾಡಿ, ಅನೇಕರು ತಮ್ಮ ಇಡೀ ಬದುಕನ್ನು ಕಲೆಗಾಗಿ ಉಳಿಸಿಕೊಂಡಿದ್ದಾರೆ. ಅಂತಹವರಿಂದಲೇ ಇಂದು ಕಲೆ, ಸಾಹಿತ್ಯ, ಸಂಗೀತ ಉಳಿದಿದೆ ಎಂದರು.
2021ರ ಸಂಸ್ಕೃತಿ ಪುರಸ್ಕಾರವನ್ನು ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ, ಹಿನ್ನ್ನೆಲೆ ಗಾಯಕಿ ಉಷಾ ಕೋಕಿಲಾ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ. ಸತೀಶ್, ಗಾಯಕ ಬೆಂಗಳೂರು ರಘುನಾಥ್ ಅವರಿಗೆ ನೀಡಿ ಗೌರವಿಸಲಾಯಿತು.
ಹೈಕೋರ್ಟ್ ವಕೀಲ ಕೆ.ರಾಮಸಿಂಗ್, ಕಲ್ಯಾಣ ಮಂಟಪದ ಮಾಲೀಕ ಎ.ಎಸ್ ಕೃಷ್ಣಮೂರ್ತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಟಿ.ನರಸಯ್ಯ, ಸಾಹಿತಿ ಡಾ.ಎಚ್.ವಿ. ಮೂರ್ತಿ, ಚಲನಚಿತ್ರ ಕಲಾವಿದರಾದ ಮಂಡ್ಯ ಸತ್ಯ, ಎಚ್.ಕೆ. ಜವರಯ್ಯ, ಅರ್ಕಾವತಿ ವಿದ್ಯಾಗಣಪತಿ ಸೇವಾ ಸಂಘದ ಅಧ್ಯಕ್ಷ ಪಿ.ವೈ. ರವೀಂದ್ರ ಹೇರ್ಳೆ, ಎಸ್.ಸಿ. ಚಿನ್ನಗಿರಿಗೌಡ, ಎನ್.ವಿ. ಲೋಕೇಶ್, ಸಂಸ್ಕೃತಿ ಸೌರಭ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ರಾ.ಬಿ.ನಾಗರಾಜು, ಶಿಕ್ಷಕ ರಾಜಶೇಖರ ಪಾಟೀಲ್, ಎಚ್.ಬಿ. ಸಿದ್ದರಾಜು ವಂದಿಸಿದರು.