ನ್ಯೂಸ್

ಸುಪ್ರೀಂ ಕೋರ್ಟ್​ ಪ್ರವೇಶಿಸುವುದು ಇನ್ನು ಮುಂದೆ ಸುಲಭ; ಇ-ಪಾಸ್​ ಪೋರ್ಟಲ್​​ ಘೋಷಿಸಿದ ಸಿಜೆಐ

ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್​ ಪ್ರವೇಶಿಸಲು ಇನ್ನು ಮುಂದೆ ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಇದಕ್ಕಾಗಿ ಆನ್​ಲೈನ್​ನಲ್ಲಿ ಸುಸ್ವಾಗತಂ ಪೋರ್ಟಲ್​ಅನ್ನು ಆರಂಭಿಸಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ(CJI) ಡಿ.ವೈ. ಚಂದ್ರಚೂಡ್​ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ನೇತೃತ್ವದ ಐದು ಸದಸ್ಯರ ಪೀಠವು ಪೋರ್ಟಲ್​ ಆರಂಭಿಸುವುದಾಗಿ ಘೋಷಿಸಿದೆ.

ಸುಸ್ವಾಗತಂ ವೆಬ್​ ಪೋರ್ಟಲ್​ ಮೊಬೈಲ್​ ಸ್ನೇಹಿಯಾಗಿದ್ದು, ವಿಚಾರಣೆಗೆ ಹಾಜರಾಗಲು, ವಕೀಲರನ್ನು ಭೇಟಿ ಮಾಡಲು ಹಾಗೂ ವಿವಿಧ ಉದ್ದೇಶಗಳಿಗೆ ಸುಪ್ರೀಂ ಕೋರ್ಟ್​ಗೆ ಬರುವವರು ಇದರ ಮೂಲಕ ಪಾಸ್​ಗಳನ್ನು ಪಡೆಯಬಹುದಾಗಿದೆ ಎಂದು ಸಿಜೆಐ ತಿಳಿಸಿದ್ದಾರೆ.

ಸುಸ್ವಾಗತಂ ಪೋರ್ಟಲ್​ಅನ್ನು ಜುಲೈ 25ರಂದು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಆಗಸ್ಟ್​ 9ರವರೆಗೆ ಪೋರ್ಟಲ್​ ಮೂಲಕ 10 ಸಾವಿರ ಪಾಸ್​ಗಳನ್ನೂ ವಿತರಿಸಲಾಗಿದೆ. ಇನ್ನು ಮುಂದೆ ಪಾಸ್​ಗಳಿಗಾಗಿ ಜನರು ಸರದಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಎಲ್ಲರಿಗೂ ಆನ್​ಲೈನ್​ ಮೂಲಕವೇ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಪೋರ್ಟಲ್ಅನ್ನು ಹೇಗೆ ಬಳಕೆ ಮಾಡಬೇಕೆಂಬ ಕುರಿತು ವಿಡಿಯೋ ಪ್ರಾತ್ಯಕ್ಷಿಕೆ ಲಭ್ಯವಿದ್ದು, ಅದನ್ನು ನೋಡಿ ಎಲ್ಲರೂ ತಿಳಿದುಕೊಳ್ಳಬಹುದು ಎಂದು ಮುಖ್ಯ ನ್ಯಾಯಮೂರ್ತಿ(CJI) ಡಿ.ವೈ. ಚಂದ್ರಚೂಡ್​ ಸುಸ್ವಾಗತಂ ಕುರಿತು ತಿಳಿಸಿದ್ದಾರೆ.