ಚನ್ನರಾಯಪಟ್ಟಣ: ಜನತೆ ಬೆಚ್ಚಗೆ ಮಲಗಿರುವ ಹೊತ್ತಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರಕಾರ್ಮಿಕರು ಪಟ್ಟಣದ ಹಿರಿಮೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಶ್ಲಾಘಿಸಿದರು.
ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪಂಪ್‌ಹೌಸ್ ಆವರಣದಲ್ಲಿ ಶನಿವಾರ ಪುರಸಭಾ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರಕಾರ್ಮಿಕರು ನೈಜ ಕಾಯಕ ಯೋಗಿಗಳು, ಸ್ವಚ್ಛತಾ ರೂವಾರಿಗಳು. ಪೌರಕಾರ್ಮಿಕರು ಸದಾ ಸ್ಮರಣೀಯರು. ಅವರಿಗೆ ಸಲ್ಲಬೇಕಾದ ಸವಲತ್ತುಗಳು ಸಲ್ಲಬೇಕು. ಆ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ವಹಿಸುತ್ತಿರುವುದು ಸ್ವಾಗತಾರ್ಹ ಎಂದರು.
ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಕುಟುಂಬದ ಉಳಿದ ಸದಸ್ಯರ ಆರೋಗ್ಯದ ಕುರಿತೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಪುರಸಭೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ಸದಸ್ಯರಾದ ಎಚ್.ಎನ್.ನವೀನ್, ಧರಣೇಶ್, ಗಣೇಶ್, ಯೋಗೇಶ್, ರಾಣಿಕೃಷ್ಣ, ಲಕ್ಷ್ಮಮ್ಮ, ಪರ್ವೀನ್ ತಾಜ್, ಆರೋಗ್ಯ ನಿರೀಕ್ಷಕರಾದ ರಾಜು, ಮಂಜುನಾಥ್, ಉಮಾ, ಪುರಸಭೆಯ ನೌಕರರು ಹಾಗೂ ಪೌರಕಾರ್ಮಿಕರು ಹಾಜರಿದ್ದರು.