ಕೋಲಾರ: ಕೋಲಾರ ನಗರ ಸಭೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಆಯವ್ಯಯ ಸಭೆಯು ಪ್ರಾರಂಭವಾಗುವ ಮುನ್ನ ಗದ್ದಲ ಸೃಷ್ಟಿಯಾಯಿತು.
ಮಾ.10ರಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಅಧಿಕಾರಿಗಳೊಂದಿಗೆ ನಗರಸಭೆಗೆ ದಿಢೀರನೆ ದಾಳಿ ನಡೆಸಿದ್ದ ಸಂದರ್ಭದಲ್ಲಿ, ಇ&ಖಾತೆ ವಿಚಾರ ಬಂದಾಗ ಸದಸ್ಯರು ಒತ್ತಡ ಹಾಕುತ್ತಾರೆ, ಕೆಲಸ ಮಾಡಲು ಬಿಡುವುದಿಲ್ಲ ಎಂದು ಪೌರಾಯುಕ್ತ ಪ್ರಸಾದ್ರೆಡ್ಡಿ ಹೇಳಿದ್ದರು. ಇದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಭೆಗೆ ಹಾಜರಾಗಿದ್ದ ಸದಸ್ಯರಾದ ಎಸ್.ಆರ್.ಮುರಳಿಗೌಡ, ಪ್ರವಿಣ್ ಗೌಡ, ರಾಕೇಶ್, ಗುಣಶೇಖರ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿ ಪ್ರತ್ಯೇಕವಾಗಿ ಸದಸ್ಯರ ಹೆಸರು ಬಹಿರಂಗ ಪಡಿಸಬೇಕಿತ್ತು, ಅದು ಬಿಟ್ಟು ಅಧ್ಯಕ್ಷರನ್ನು ಒಳಗೊಂಡಂತೆ ಕೌನ್ಸಿಲ್ಗೆ ಧಕ್ಕೆಯುಂಟು ಮಾಡುವ ಕೆಲಸ ಮಾಡಿದ್ದೀರಿ, ಇದೀಗ ಸ್ವಯಂ ದೂರು ದಾಖಲಾಗಿದ್ದು, ಹೇಳಿಕೆಯೂ ನಮೂದಾಗಿದೆ, ಇದಕ್ಕೆ ಹೊಣೆಯಾರು, ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಆಗ ಪೌರಾಯುಕ್ತ ಪ್ರಸಾದ್ ನಾನು ಯಾರ ಹೆಸರನ್ನೂ ಹೇಳಿಲ್ಲ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಆಗ ಪರಿಸ್ಥಿತಿ ತೀವ್ರಗೊಂಡಿತಾದರೂ, ನಂತರ ಕ್ಷಮೆಯಾಚಿಸಿದ ನಂತರ ಸದಸ್ಯರು ಸಮಾಧಾನಗೊಂಡು ಸಭೆಯಿಂದ ಹೊರ ನಡೆದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಪ್ರಸಾದ್ ರೆಡ್ಡಿ, ಸಮಸ್ಯೆ ಹೇಳಿಕೊಂಡು ವಿವಿಧ ರೀತಿಯ ಜನರು ಬರುತ್ತಾರೆ. ಅದರಲ್ಲೂ ಕಚೇರಿತನಕ ಬರುವವರಲ್ಲಿ ಬಡವರೇ ಹೆಚ್ಚು. ಅರ್ಜಿ ಸಲ್ಲಿಸಿದವರಿಗೆ ಕಾನೂನಿನಡಿ ಕೆಲಸ ಮಾಡಿಕೊಡಲಾಗಿದೆ ಎಂದರು. ಗ್ರಾಮ ಪಂಚಾಯಿತಿಯಿಂದ ವರ್ಗಾವಣೆಯಾಗಿರುವ ಆಸ್ತಿಗಳಿಗೆ ಕಾನೂನು ಪ್ರಕಾರ ತೆರಿಗೆ ಪಾವತಿ ಮಾಡಿಕೊಂಡು ನೀಡಲಾಗಿದ್ದು, ಯಾರೊ ಕೆಲವರು ಅಧಿಕಾರಿಗಳ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ನೀಡಲಾಗಿರುವ ಇ&ಖಾತೆಗಳ ಸಂಬಂಧ ಕೆಲ ಸದಸ್ಯರೇ ದೂರು ನೀಡಿದ್ದು, ವರದಿ ಸಲ್ಲಿಕೆಯಾಗಿದೆ. ಇದನ್ನು ಎದುರಿಸಲಾಗುವುದು ಎಂದು ಮಾರ್ಮಿಕವಾಗಿ ನುಡಿದರು.
ಇದಕ್ಕೆ ಗರಂ ಆದ ಸದಸ್ಯ ಎಸ್.ಆರ್.ಮುರಳಿಗೌಡ, ಕಳೆದ ಅವಧಿಯಲ್ಲಿ 1,700ಕ್ಕೂ ಹೆಚ್ಚು ಖಾತೆಗಳ ಪೈಕಿ 408 ಅರ್ಜಿಗಳಿಗೆ ಅಕ್ರಮ ಖಾತೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಲೋಕಾಯುಕ್ತರು ದೂರು ದಾಖಲಿಸಿಕೊಂಡಿದ್ದಾರೆ. ನಮಗೇನು ಅಧಿಕಾರಿಗಳ ವಿರುದ್ಧ ವೈಯಕ್ತಿಕ ಜಿದ್ದಿಲ್ಲ. ಇಲ್ಲಿನ ಜನಕ್ಕೆ ಮೋಸ ಆಗುತ್ತಿದ್ದರೆ ಸುಮ್ಮನಿರಲು ಸಾಧ್ಯವಿಲ್ಲ. ಸದಸ್ಯರು ಯಾರಾದರೂ ಕಿರುಕುಳ ನೀಡಿದರೆ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಿ ಸದಸ್ಯತ್ವ ಅನರ್ಹ ಮಾಡಿಸಬಹುದು ಎಂದು ಗರಂ ಆದರು.
ಸದಸ್ಯ ರಾಕೇಶ್ ಮಾತನಾಡಿ, ಈಗಾಗಲೇ ನಗರಸಭೆ ಎಂದರೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ರೀತಿ ಬೆಳವಣಿಗೆಗಳು ಆಗುತ್ತಿದ್ದರೆ ಮುಂದಿನ ದಿನಗಳಲ್ಲಿ ನಗರಸಭೆ ಇದೆಯೋ ಇಲ್ಲವೋ ಎಂಬ ಭಾವನೆ ವ್ಯಕ್ತವಾಗುತ್ತದೆ. ಸದಸ್ಯರಷ್ಟೇ ಅಧಿಕಾರಿಗಳಿಗೂ ಜವಾಬ್ದಾರಿಯಿದ್ದು, ಅಪಾದನೆ ಹೊರಿಸುವುದು ಒಳ್ಳೆಯದಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಸಿಎ ಸೈಟು, ಪಾರ್ಕ್ಗಳನ್ನು ಖಾತೆ ಮಾಡಿಲ್ಲ. ಅಗ್ರಿಮೆಂಟ್, ಎಸ್ಎಎಸ್ ಸಂಬಂಧಿಸಿದ್ದಕ್ಕೆ ಖಾತೆ ನೀಡಲಾಗಿದೆ. 600-700 ಕಡತಗಳನ್ನು ಕಮಿಷನರ್, ಆರ್ಒ, ಆರ್ಐ ಎತ್ತುಕೊಂಡು ಹೋಗಲು ಸಾಧ್ಯವಿಲ್ಲ. ಅದಕ್ಕೆ ಯಾರು ಜವಾಬ್ದಾರರು?, ತಪ್ಪು ಮಾಡಿದವರು ತನಿಖೆಯಾಗಿ ಶಿಕ್ಷೆ ಅನುಭವಿಸುತ್ತಾರೆ ಎಂದು ಪೌರಾಯುಕ್ತ ಗರಂ ಆದರು.
ಇಷ್ಟೆಲ್ಲಾ ಗಲಾಟೆಯಾಗುತ್ತಿದ್ದರೂ ಅಧ್ಯೆ ಲಕ್ಷ್ಮೀದೇವಮ್ಮ ಮೂಕಪ್ರೇಕ್ಷಕರಂತೆ ಇದ್ದುದನ್ನು ನೋಡಿದ ಕೆಲ ಸದಸ್ಯರು ಅಸಮಾಧಾನ ಹೊರ ಹಾಕಿದರು.
* ಬಜೆಟ್ ಸಭೆ ಮುಂದೂಡಿಕೆ
ಬಜೆಟ್ ಸಭೆಯನ್ನು ಕೊರಂ ಕೊರತೆಯಿಂದ ಶನಿವಾರಕ್ಕೆ ಮುಂದೂಡಿ ಅಧ್ಯೆ ಲಕ್ಷ್ಮೀದೇವಮ್ಮ ಘೋಷಿಸಿದರು.
ಒಟ್ಟು 35 ಮಂದಿ ಸದಸ್ಯರ ಪೈಕಿ 5 ಮಂದಿ ಸಭೆಯೊಳಗೆ ಆಗಮಿಸಿ ವಾಪಸ್ ತೆರಳಿದರು. ಉಪಾಧ್ಯೆ ಸೇರಿ 30 ಸದಸ್ಯರು ಗೈರಾಗಿದ್ದರು. ಪೌರಾಯುಕ್ತ ಪ್ರಸಾದ್ ರೆಡ್ಡಿ, ಅಧ್ಯೆ ಲಕ್ಷ್ಮೀದೇವಮ್ಮ 1 ತಾಸಿಗೂ ಅಧಿಕ ಕಾಲ ಕುಳಿತಿದ್ದರೂ ಯಾರೂ ಬರಲಿಲ್ಲ. ಆಗ ಮಾ.29ಕ್ಕೆ ಸಭೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
* ಅವಿಶ್ವಾಸ ಮಂಡನೆಯ ಗುಮಾನಿ
ಲಕ್ಷಿ$್ಮದೇವಮ್ಮ ಅಭಿವೃದ್ಧಿ ವಿಚಾರವಾಗಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದು ಕೆಲ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಯುಗಾದಿ ಕಳೆದ ಕೂಡಲೇ ಅವಿಶ್ವಾಸ ಮಂಡನೆ ಮಾಡುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸಭೆಗೆ ಸದಸ್ಯರು ಹಾಜರಾಗದೆ ಇರುವುದಕ್ಕೆ ಇದೂ ಒಂದು ಕಾರಣವಾಗಿದೆ. ನಗರಸಭೆಯಲ್ಲಿ ಆಡಳಿತ ಯಂತ್ರ ಕುಸಿದಿದೆ. ಕಚೇರಿಯಲ್ಲೂ ಸಕಾಲಕ್ಕೆ ಸಿಬ್ಬಂದಿ ಲಭ್ಯವಾಗುವುದಿಲ್ಲ ಎಂಬ ಆರೋಪ ಕೇಳಿಬಂದಿತು.