ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಾಲಿವುಡ್ ಚೆಲುವೆ, ನಟಿ ಕಂಗನಾ ರಣಾವತ್, ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ ಗೆದ್ದು, ನೂತನ ಸಂಸದೆಯಾಗಿ ಆಯ್ಕೆಯಾಗಿರುವುದು ಇದೀಗ ವಿರೋಧ ಪಕ್ಷಗಳ ನಾಯಕರ ಹುಬ್ಬೇರಿಸಿದೆ. ಗೆಲುವು ಸಾಧಿಸಿದ ಖುಷಿಯಲ್ಲಿದ್ದ ನಟಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್(CISF) ಮಹಿಳಾ ಪೇದೆಯೊಬ್ಬರು ಕಪಾಳ ಮೋಕ್ಷ ಮಾಡಿದ ಘಟನೆ ಅತೀವ ನೋವನ್ನು ತಂದೊಡ್ಡಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಕಂಗನಾ ರಣಾವತ್ ಮೇಲೆ ಹಲ್ಲೆ ನಡೆಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ತಕ್ಷಣವೇ ಕರ್ತವ್ಯದಿಂದ ಅಮಾನತುಗೊಳಿಸಿ, ಚಂಡೀಗಢ ಏರ್ಪೋರ್ಟ್ನಲ್ಲಿ ಬಂಧಿಸಲಾಯಿತು. ನೂತನ ಸಂಸದೆ ಮೇಲೆ ಅನುಚಿತ ವರ್ತನೆ ಆರೋಪದ ಮೇಲೆ ಮಹಿಳಾ ಸಿಐಎಸ್‌ಎಫ್ ಪೇದೆಯ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.
ಇನ್ನು ಕರ್ತವ್ಯದಿಂದ ಅಮಾನತುಗೊಂಡ ಕುಲ್ವಿಂದರ್ ಕೌರ್, ತಮ್ಮ ಅಧಿಕೃತ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ, "ಈ ಕೆಲಸ ಕಳೆದುಕೊಳ್ಳುವ ಭಯ ನನಗಿಲ್ಲ. ನನ್ನ ತಾಯಿಯ ಗೌರವಕ್ಕಾಗಿ ಇಂತಹ ಸಾವಿರಾರು ಉದ್ಯೋಗಗಳನ್ನು ಕಳೆದುಕೊಳ್ಳಲು ನಾನು ಸಿದ್ಧ" ಎಂದು ಬರೆದು, ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).