ನ್ಯೂಸ್

ಸರಳ, ಸುಂದರ ಹೊಸ ದಿನಚರಿ: ವಿಜಯವಾಣಿ ಸಿನಿಮಾ ವಿಮರ್ಶೆ

  • ಚಿತ್ರ: ಹೊಸ ದಿನಚರಿ
  • ನಿರ್ದೇಶನ: ಕೀರ್ತಿ ಶೇಖರ್ ಮತ್ತು ವೈಶಾಖ್ ಪುಷ್ಪಲತ
  • ನಿರ್ಮಾಣ: ಗಂಗಾಧರ್ ಸಾಲಿಮಠ್, ಅಶೋಕ್ ಚೌರಾಸಿಯಾ ಮತ್ತು ಮೃತ್ಯುಂಜಯ ಶುಕ್ಲಾ
  • ತಾರಾಗಣ: ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ಚೇತನ್ ವಿಕ್ಕಿ, ಮಂದಾರ, ವರ್ಷಾ, ಶ್ರೀಪ್ರಿಯಾ, ಸುಪ್ರೀತ್, ದೀಪಕ್ ಹಾಗೂ ಮುಂತಾದವರು

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

‘ಕಥೆಗಳು ಕೊನೆಯಾಗ್ತವೆ, ವ್ಯಕ್ತಿಗಳು ಬಂದು ಹೋಗ್ತಾರೆ... ಆದ್ರೆ, ಅವು› ಬಿಟ್ಹೋಗೋ ನೆನಪುಗಳು ಹಾಗೇ ಉಳೀತವೆ’ ‘ಹೊಸ ದಿನಚರಿ’ ಚಿತ್ರದ ಅಂತ್ಯದಲ್ಲಿರುವ ಡೈಲಾಗ್ ಇದು. ಅಷ್ಟರಲ್ಲಿ 4 ಕಥೆಗಳಲ್ಲಿ ತೇಲುವ ಪ್ರೇಕ್ಷಕ, ಅವು ಸಾಗಿದಂತೆ ತನ್ನನ್ನು ತಾನೇ ಅಲ್ಲಲ್ಲಿ ಕಾಣುತ್ತಾನೆ. ತನ್ನನ್ನು ತಾನು ಪರಾಮಶಿಸಿಕೊಳ್ಳುತ್ತಾನೆ. ಸಿನಿಮಾ ಗಾಢವಾಗಿ ಮನಸ್ಸಿನಲ್ಲಿ ಉಳಿಯದಿದ್ದರೂ, ನೆನಪುಗಳನ್ನು ಮತ್ತೆ ಮರುಕಳಿಸುತ್ತದೆ, ಪ್ರೇಕ್ಷಕರನ್ನು ಯೋಚಿಸುವಂತೆ ಮಾಡುತ್ತದೆ.

‘ಡ್ರೖೆವರ್ ಆದ್ರೇನ್ ಚಿನ್ನ, ಡೈಮಂಡ್ ಥರಾ ನೋಡ್ಕೋತೀನ್ ನಿನ್ನ’ ಅಂತ ಕಾರ್ ಮೇಲೆ ಬರೆಸಿಕೊಂಡ ಕ್ಯಾಬ್ ಚಾಲಕ ರಾಜೇಶ್ (ವಿಕ್ಕಿ) 3 ವರ್ಷಗಳಿಂದ ಮದುವೆಗೆ ವಧು ಹುಡುಕುತ್ತಿರುತ್ತಾನೆ. ಲಿವಿನ್ ರಿಲೇಷನ್​ಶಿಪ್​ನಲ್ಲಿರುವ ಬಾಯ್ಫ್ರೆಂಡ್ ಶರಣ್ (ಸುಪ್ರೀತ್) ಜಗಳ ಆಡಲ್ಲ, ತನ್ನನ್ನು ಬೈಯಲ್ಲ ಅಂತ ಅಪೇಕ್ಷಾ (ಮಂದಾರ) ಸಂಬಂಧವನ್ನೇ ಮುರಿದುಕೊಳ್ಳಲು ಮುಂದಾಗುತ್ತಾಳೆ. 45 ವರ್ಷಗಳ ಸಂಸಾರದಲ್ಲಿ ಎಲ್ಲ ಬಗೆಯ ಸುಖ, ದುಃಖಗಳನ್ನೂ ಕಂಡ ಹಿರಿಯ ದಂಪತಿ ವೀರಣ್ಣ (ಬಾಬು ಹಿರಣ್ಣಯ್ಯ) ಮತ್ತು ಗೌರಿಗೆ (ಅರುಣಾ ಬಾಲರಾಜ್) ಕರುಳ ಕುಡಿ ಹತ್ತಿರವಿಲ್ಲ ಎಂಬ ನೋವು. ಮತ್ತೊಂದೆಡೆ ಕರೋನಾ ಸಮಯದಲ್ಲಿ ಕೆಲಸದ ಒತ್ತಡದಿಂದಾಗಿ ಮನೆಗೆ ಹೋಗಲಾರದೇ ತೊಳಲಾಡುತ್ತಿರುತ್ತಾನೆ ಡಾ. ಭರತ್ (ದೀಪಕ್). ಹೀಗೆ ‘ಹೊಸ ದಿನಚರಿ’ ಹಲವು ಹಿನ್ನೆಲೆಗಳ, ನಾನಾ ವ್ಯಕ್ತಿತ್ವಗಳ ನಾಲ್ಕು ಕಥೆಗಳ ಸಮ್ಮಿಲನ. ಕರೊನಾ ಲಾಕ್​ಡೌನ್ ಸಮಯದಲ್ಲಿ ಅವರು ಎದುರಿಸುವ ಸಮಸ್ಯೆ? ಹೇಗೆ ಅದರಿಂದ ಹೊರಬರುತ್ತಾರೆ? ಅವರ ಜೀವನ ಹೇಗೆ ಬದಲಾಗುತ್ತದೆ? ಎಂಬುದರ ಸುತ್ತ ಕಥೆ ಸುತ್ತುತ್ತದೆ.

ಕೀರ್ತಿ ಶೇಖರ್ ಮತ್ತು ವೈಶಾಖ್ ಪುಷ್ಪಲತ ನಿರ್ದೇಶನದ ಮೊದಲ ಚಿತ್ರವಿದು. ಹೊಸಬರ ಹೊಸತನ ಚಿತ್ರದಲ್ಲಿ ಕಾಣುತ್ತದೆ. ಆಕ್ಷನ್, ಮಸಾಲಾ, ಡಬಲ್ ಮೀನಿಂಗ್, ಮಚ್ಚು, ಲಾಂಗುಗಳ ಅಬ್ಬರದ ನಡುವೆ ನಿರ್ದೇಶಕರು ಸರಳ ಸುಂದರ ಎನಿಸುವ ಕಥೆ ಕಟ್ಟಿಕೊಟ್ಟಿದ್ದಾರೆ. ಕರೋನಾ ಸಮಯದಲ್ಲಿ ನಮಗೂ ಹೀಗಾಗಿತ್ತಲ್ವಾ? ಎಂದು ಹಲವು ಬಾರಿ ಅನ್ನಿಸಬಹುದು. ನಮ್ಮದೇ ಜೀವನದ ಹಿಂದಿನ ಪುಟಗಳನ್ನು ತಿರುಗಿಸಿ ನೋಡಿದೆವಾ ಎಂಬ ಭಾವನೆ ಮೂಡಿಸಬಹುದು. ಕೆಲವೆಡೆ ನಿಧಾನ ಎನಿಸಿದರೂ, ಪ್ರತಿಯೊಬ್ಬರ ಬದುಕಿನಲ್ಲೂ ಸಂಬಂಧಗಳು ಮತ್ತು ಪ್ರೀತಿ ಎಷ್ಟು ಮುಖ್ಯ ಎಂಬ ಜೀವನಪಾಠವಿದೆ. ರಾಕೀ ಛಾಯಾಗ್ರಹಣ ಹಾಗೂ ವೈಶಾಕ್ ಶರ್ಮಾ ಸಂಗೀತದಲ್ಲಿ ‘ನೀನೆ’ ಮತ್ತು ‘ನಿನದೇ ನೆನಪು’ ಹಾಡುಗಳು ಚಿತ್ರವನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ. ವಿಕ್ಕಿ, ಮಂದಾರ, ವರ್ಷಾ ಭರವಸೆ ಮೂಡಿಸುತ್ತಾರೆ. ಅನುಭವಿಗಳಾದ ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆ ‘ಹೊಸ ದಿನಚರಿ’ ಹಳೆಯ ನೆನಪುಗಳನ್ನು ಮರುಕಳಿಸುವ, ಹೊಸ ಅನುಭವ ನೀಡುವ ಸಿನಿಮಾ.