ನ್ಯೂಸ್

ಟಾಪ್​ 10 ಮೋಸ್ಟ್​ ವಾಂಟೆಡ್​ ಕ್ರಿಮಿನಲ್ ಪಟ್ಟಿಯಲ್ಲಿದ್ದ ಸಿಂಡಿ ಸಿಂಗ್ ಕಡೆಗೂ ಅರೆಸ್ಟ್​; ಈಕೆ ಮಾಡಿದ್ದಾದರೂ ಏನು? | Cindy Singh

Cindy Singh: ಅಮೆರಿಕಾದ ಟಾಪ್​ 10 ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ಗಳ ಪಟ್ಟಿಯಲ್ಲಿದ್ದ ಸಿಂಡಿ ರೊಡ್ರಿಗಸ್​ ಸಿಂಗ್ ಇದೀಗ ಕಡೆಗೂ ಎಫ್​ಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಭಾರತದಲ್ಲಿ ಬಂಧನವಾಗಿದ್ದಾಳೆ.

ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್​ನ (ಎಫ್‌ಬಿಐ) ಭಾರತದ ಟೆನ್ ಮೋಸ್ಟ್ ವಾಂಟೆಡ್ ಕ್ರಿಮಿನಲ್​ ಪಟ್ಟಿಯಲ್ಲಿ ಒಬ್ಬಳಾಗಿದ್ದ ಸಿಂಡಿ ರೊಡ್ರಿಗಸ್ ಸಿಂಗ್​ನ ಭಾರತದಲ್ಲಿ ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. 40 ವರ್ಷ ವಯಸ್ಸಿನ ಮಹಿಳೆ ಸಿಂಗ್, 2022ರಲ್ಲಿ ತನ್ನ ಮಗ ನೋಯೆಲ್ ರೊಡ್ರಿಗಸ್ ಅಲ್ವಾರೆಜ್​ನನ್ನು (6) ಬರ್ಬರವಾಗಿ ಕೊಲೆಗೈದಿದ್ದಳು. ತಾನೇ ಜನ್ಮಕೊಟ್ಟ ಮಗುವಿನ ಕೊಲೆಗೆ ಸಂಬಂಧಿಸಿದಂತೆ ಆರೋಪಗಳನ್ನು ಹೊತ್ತುಕೊಳ್ಳಲು ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಕೆ 2023ರ ಮಾರ್ಚ್​ನಲ್ಲಿ ಅಮೆರಿಕದಿಂದ ನಾಪತ್ತೆಯಾಗಿದ್ದಳು.

ಮಗನ ಸುಳಿವೇ ಇಲ್ಲ

ತನ್ನ ಭಾರತೀಯ ಮೂಲದ ಪತಿ ಅರ್ಶ್ದೀಪ್ ಸಿಂಗ್ ಮತ್ತು ಆರು ಮಕ್ಕಳೊಂದಿಗೆ ಸಿಂಡಿ, ಕೊನೆಯ ಬಾರಿಗೆ 2023ರ ಮಾರ್ಚ್​ 22ರಂದು ಭಾರತಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಕಾಣಿಸಿಕೊಂಡಿರುವುದು ವರದಿಯಾಗಿದೆ. ಈ ವೇಳೆ ಆಕೆಯೊಂದಿಗೆ ಕೊಲೆಯಾದ ಮಗ ನೋಯೆಲ್ ರೊಡ್ರಿಗಸ್ ಸುಳಿವು ಸಿಕ್ಕಿಲ್ಲ. ಏರ್​ಪೋರ್ಟ್​ ದಾಖಲೆಯಲ್ಲೂ ಆತನ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ವಿಷಯ ಪೊಲೀಸರ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿತು.

ಶ್ವೇತಭವನ ಪ್ರತಿಕ್ರಿಯೆ

"10 ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ಪಟ್ಟಿಯಲ್ಲಿದ್ದ ಕೊಲೆ ಆರೋಪಿ ಸಿಂಡಿಯನ್ನು ಬಂಧಿಸುವಲ್ಲಿ ಎಫ್​ಬಿಐ ಕಡೆಗೂ ಯಶಸ್ವಿಯಾಗಿದೆ. ಇದಕ್ಕೆ ನಾವು ಟ್ರಂಪ್ ಆಡಳಿತಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇವೆ. ಕಳೆದ 7 ತಿಂಗಳಲ್ಲಿ 4ನೇ ಮೋಸ್ಟ್ ವಾಂಟೆಡ್ ಆರೋಪಿಯನ್ನು ಬಂಧಿಸಲಾಗಿದೆ. ಸಿಂಡಿ ಸಿಂಗ್ ಕಾನೂನುಬಾಹಿರ ಹಾರಾಟ ಮತ್ತು ಮರಣದಂಡನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಈ ಪ್ರಯತ್ನಗಳನ್ನು ಮಾಡಿದ್ದಾಳೆ. ಆಕೆಯ ಬಂಧನ ಇತರ ಅಪರಾಧಿಗಳಿಗೆ ಎಚ್ಚರಿಕೆ ಸಂದೇಶ. ಶೀಘ್ರವೇ ನಿಮ್ಮನ್ನೂ ಸೆರೆಹಿಡಿಯಲಾಗುತ್ತದೆ ಮತ್ತು ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ" ಎಂದು ಅಮೆರಿಕದ ಶ್ವೇತಭವನ ಟ್ವೀಟ್​ ಮಾಡಿದೆ.

ಸಿಂಡಿಗಾಗಿ ರೆಡ್​ ನೋಟಿಸ್​

ಅಕ್ಟೋಬರ್ 2024ರಲ್ಲಿ, ಇಂಟರ್ಪೋಲ್ ಆಕೆಯ ವಿರುದ್ಧ ರೆಡ್ ನೋಟಿಸ್ ಹೊರಡಿಸಿತು. ಫೆಡರಲ್ ತನಿಖಾ ಸಂಸ್ಥೆಯು ಆರೋಪಿಯ ಬಂಧನಕ್ಕೆ ಸಹಾಯ ಮಾಡುವವರಿಗೆ ಅಥವಾ ಖಚಿತ ಮಾಹಿತಿ ನೀಡುವವರಿಗೆ 25,000ರಿಂದ 2,50,000 ಡಾಲರ್ ಬಹುಮಾನ ಘೋಷಿಸಿತ್ತು. ಇದರ ಬೆನ್ನಲ್ಲೇ ಆಕೆಯ ಹೆಸರನ್ನು ಎಫ್​ಬಿಐ, ಮೋಸ್ಟ್ ವಾಂಟೆಡ್ ಕ್ರಿಮಿನಲ್​ಗಳ ಪಟ್ಟಿಗೆ ಸೇರಿಸಿತು. ಭಾರತೀಯ ಅಧಿಕಾರಿಗಳು ಮತ್ತು ಇಂಟರ್ಪೋಲ್ ಜತೆಗಿನ ನಿಕಟ ಸಂಪರ್ಕದೊಂದಿಗೆ ಸಿಂಡಿಯನ್ನು ಎಫ್​ಬಿಐ ಅಧಿಕಾರಿಗಳು ಭಾರತದಲ್ಲಿ ಬಂಧಿಸಿದ್ದಾರೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಆಕೆಯನ್ನು ಟೆಕ್ಸಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಲು ಸೂಚಿಸಲಾಗಿದೆ.

ಯಾರು ಈ ಸಿಂಡಿ ರೊಡ್ರಿಗಸ್ ಸಿಂಗ್?

ತನ್ನ ಸ್ವಂತ ಮಗನನ್ನೇ ಬರ್ಬರವಾಗಿ ಕೊಂದ ಆರೋಪ ಹೊತ್ತಿರುವ ಎಫ್‌ಬಿಐನ ಹತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್​ ಪಟ್ಟಿಯಲ್ಲಿ ಸ್ಥಾನ ಪಡೆದ ಮಹಿಳಾ ಕ್ರಿಮಿನಲ್​ ಈ ಸಿಂಡಿ ಸಿಂಗ್​. ಪಟ್ಟಿಯಲ್ಲಿ ಆಕೆಯನ್ನು 4ನೇ ಸ್ಥಾನದಲ್ಲಿ ಇರಿಸಲಾಗಿತ್ತು ಎಂದು ವರದಿಯಾಗಿದೆ. ಸಿಂಗ್ ತನ್ನ ಮಗು ಭೂತದ ಸ್ವರೂಪ! ಆತ ನಮಗೆ ಮತ್ತು ಅವಳ-ಜವಳಿ ಮಕ್ಕಳಿಗೆ ತೊಂದರೆ ಎಂದು ಮೂಢನಂಬಿಕೆಗಳಲ್ಲಿ ಮುಳುಗಿದ್ದಳು. ಮೃತ ಮಗುವಿಗೆ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿತ್ತು. ನೋಯೆಲ್​ ಆಮ್ಲಜನಕದ ಸಹಾಯದಿಂದ ಬದುಕುತ್ತಿದ್ದ. ಈ ಮಗುವನ್ನು ನಿಂದಿಸಿದ್ದಲ್ಲದೇ, ಹಸಿವಿನಿಂದ ನರಳಾಡಿಸಿ, ನೀರನ್ನು ಸಹ ಕೊಡಲು ಸಿಂಡಿ ನಿರಾಕರಿಸಿದ್ದಾಗಿ ತನಿಖಾ ಸಂಸ್ಥೆಗಳು ತಮ್ಮ ವರದಿಯಲ್ಲಿ ತಿಳಿಸಿವೆ.

2023ರ ಅಕ್ಟೋಬರ್ 31ರಂದು ಟೆಕ್ಸಾಸ್‌ನ ಟ್ಯಾರಂಟ್ ಕೌಂಟಿಯಲ್ಲಿ ಸಿಂಡಿ ಸಿಂಗ್​ಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಈ ಮೊಕದ್ದಮೆ ಮತ್ತು ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಂಡ ಆಕೆಯನ್ನು ಬಂಧಿಸಲು ಎಫ್​ಬಿಐ ಫೆಡರಲ್​ ವಾರೆಂಟ್​ ಜಾರಿ ಮಾಡಿತ್ತು. ಆ ನಂತರ ರೆಡ್​ ನೋಟಿಸ್​ ಕೂಡ ಹೊರಡಿಸಿ, ಟಾಪ್​ 10 ಮೋಸ್ಟ್​ ವಾಂಟೆಡ್​ ಕ್ರಿಮಿನಲ್ ಪಟ್ಟಿಗೆ ಸೇರಿಸಿತು,(ಏಜೆನ್ಸೀಸ್).