ನ್ಯೂಸ್

ಸಿಐಡಿಯಿಂದ ಟ್ರಕ್ ಚಾಲಕನ ಸೆರೆ; ಅತ್ತಿಬೆಲೆ ಪಟಾಕಿ ಸ್ಫೋಟ ಪ್ರಕರಣ

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಅತ್ತಿಬೆಲೆ ಪಟಾಕಿ ಗೋದಾಮು ಸ್ಫೋಟ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಶಿವಕಾಶಿ ನಿವಾಸಿ ಎಂ. ಮರುಡು ಪಾಂಡಿ (34) ಬಂಧಿತ. ಅಕ್ಟೋಬರ್ 7ರಂದು ಆನೇಕಲ್ ಸಮೀಪದ ಅತ್ತಿಬೆಲೆಯ ಶ್ರೀ ಬಾಲಾಜಿ ಟ್ರೇಡರ್ಸ್ ಪಟಾಕಿ ಗೋದಾಮು ಸ್ಫೋಟಗೊಂಡು 17 ಮಂದಿ ಸಾವನ್ನಪ್ಪಿದ್ದರು. ಪರವಾನಗಿ ಇಲ್ಲದೆ ಶಿವಕಾಶಿಯಿಂದ ಪಟಾಕಿಯನ್ನು ಸಾಗಾಟ ಮಾಡಿದ್ದ ಆರೋಪದ ಮೇಲೆ ಮರುಡುಪಾಂಡಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಕ್ ಚಾಲಕ ಮರುಡುಪಾಂಡಿ, ಶಿವಕಾಶಿಯಿಂದ ಪಟಾಕಿಯನ್ನು ತುಂಬಿಕೊಂಡು ಅ.7ರಂದು ಅತ್ತಿಬೆಲೆ ಗೋದಾಮು ಬಳಿಗೆ ಬಂದಿದ್ದ. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಈತನ ಟ್ರಕ್ ಸಹ ಬೆಂಕಿಗೆ ಆಹುತಿಯಾಗಿತ್ತು. ಹತ್ತಿರ ಸಂಬಂಧಿಗೆ ಸೇರಿದ ಟ್ರಕ್‌ನ್ನು ವರ್ಷದ ಗುತ್ತಿಗೆ ಆಧಾರದ ಮೇಲೆ ಮರುಡುಪಾಂಡಿ, ಬಾಡಿಗೆಗೆ ಪಡೆದು ಓಡಿಸುತ್ತಿದ್ದ. ಚಾಲಕನ ಹೇಳಿಕೆ ಪಡೆದು ನ್ಯಾಯಾಂಗ ಬಂಧನಕ್ಕ ಒಪ್ಪಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.