ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಗಾಯಕಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದ ಗಾಯಕಿ ಚಿತ್ರಾ ಕಣ್ಣೀರು ಸುರಿಸಿದರು.
ಮೈಸೂರು: ಗಾಯಕಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದವರಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್. ಚಿತ್ರಾ ಅವರ ಆಗಮನ ವಿಶೇಷವಾಗಿ ಎಲ್ಲರ ಮನ ಮುಟ್ಟಿತು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಎಸ್. ಜಾನಕಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾರ್ವಜನಿಕರ ದರ್ಶನ ಮುಕ್ತಾಯಗೊಂಡು ಇನ್ನೇನು ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗೆ ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿಗೆ ಕೊಂಡೊಯ್ಯುವ ಹೊತ್ತಿನಲ್ಲಿ ಚಿತ್ರಾ ಆಗಮಿಸಿ ಅಂತಿಮ ದರ್ಶನ ಪಡೆದರು.
ಜಾನಕಿ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಚಿತ್ರಾ ಅವರು ಮೃತದೇಹವನ್ನು ಕಂಡ ಕ್ಷಣವೇ ಭಾವುಕರಾಗಿ ಕಣ್ಣೀರು ಸುರಿಸಿದರು. ಅವರನ್ನು ಕಂಡು ಅಲ್ಲಿದ್ದವರ ಕಣ್ಣುಗಳೂ ತೇವಗೊಂಡವು. ನೆರೆದಿದ್ದ ಜನರು ಚಿತ್ರಾ ಅವರನ್ನು ಸಂತೈಸಿದರೂ, ದುಃಖದಿಂದ ಮೌನವಾಗಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡದೆ ಅಲ್ಲಿಂದ ತೆರಳಿದರು.
ಚಿತ್ರಾ ಅವರು ಅಂತಿಮ ದರ್ಶನ ಪಡೆದ ಬಳಿಕ ಜಾನಕಿ ಅವರ ಪಾರ್ಥಿವ ಶರೀರವನ್ನು ಅಲಂಕೃತ ವಾಹನದಲ್ಲಿ ಕಣಿಯನಹುಂಡಿಗೆ ಕೊಂಡೊಯ್ಯಲಾಯಿತು. ವಾಹನ ಸಾಗುತ್ತಿದ್ದ ದಾರಿಯುದ್ದಕ್ಕೂ ನೂರಾರು ಅಭಿಮಾನಿಗಳು ಕೈಮುಗಿದು ಅಂತಿಮ ನಮನ ಸಲ್ಲಿಸಿದರು.