ಜೈಲರ್ 2 ಪೋಸ್ಟರ್​ 
ನ್ಯೂಸ್

‘ಜೈಲರ್ 2’ಗೆ ಸೆಡ್ಡು ಹೊಡಲಿಯದ್ದಾರೆ ಚಿರು, ಧನುಷ್ : ಅಕ್ಟೋಬರ್ ನಲ್ಲಿ ಸಿನಿಮಾ ಕ್ರಾಂತಿ

ಪ್ರಮುಖ ಮುಖ್ಯಾಂಶಗಳು

  • ಹೊಸ ಟೀಸರ್ ಮೂಲಕ ಜೈಲರ್ 2 ಚಿತ್ರದ ರಿಲೀಸ್ ಡೇಟ್​ ಅನೌನ್ಸ್
  • ಜೈಲರ್ ಸೀಕ್ವೆಲ್​ ಕಾಣಿಸಿಕೊಂಡ ಹೊಸ ಪಾತ್ರಗಳು
  • ಅಕ್ಟೋಬರ್ 15ಕ್ಕೆ ವಿಶ್ವಾದ್ಯಂತ ಸಿನಿಮಾ ತೆರೆಗೆ
ದಕ್ಷಿಣ ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳು ಈ ವರ್ಷದ ದ್ವಿತೀಯಾರ್ಧದಲ್ಲಿ ತೆರಗೆ ಬರಲಿವೆ. ಹೀಗಾಗಿ ಮುಂದಿನ ಆರು ತಿಂಗಳಲ್ಲಿ ಸ್ಟಾರ್ ನಟರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ‘ಟಾಕ್ಸಿಕ್’ ಆಗಸ್ಟ್ ತಿಂಗಳನ್ನು ಲಾಕ್ ಮಾಡಿಕೊಂಡಿದೆ. ಸೆಪ್ಟೆಂಬರ್‌ನಲ್ಲೂ ‘ಟಾಕ್ಸಿಕ್’ ಸದ್ದು ಮುಂದುವರಿವ ನಿರೀಕ್ಷೆಯಿದ್ದು, ಉಳಿದ ಚಿತ್ರತಂಡಗಳು ದಸರಾ, ದೀಪಾವಳಿಯಲ್ಲಿ ರಿಲೀಸ್ ಮಾಡಲು ಮುಂದಾಗುತ್ತಿದ್ದಾರೆ. ಅದರಂತೆ, ಈ ಬಾರಿಯ ದಸರಾಕ್ಕೆ ರಜಿನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಬಿಡುಗಡೆಯಾಗುತ್ತಿದೆ. ಗುರುವಾರ ಸಂಜೆ ವಿಶೇಷ ಪ್ರೊಮೋ ಮೂಲಕ ‘ಜೈಲರ್ 2’ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಅಕ್ಟೋಬರ್ 15ಕ್ಕೆ ವಿಶ್ವಾದ್ಯಂತ ತೆರೆ ಮೇಲೆ ಬರಲಿದೆ. ಪ್ರೋಮೋದಲ್ಲಿ ಮೊದಲ ಭಾಗದಲ್ಲಿ ಸತ್ತು ಹೋಗಿರುವ ವರ್ಮನ್ ಪಾತ್ರಧಾರಿ ಖಳನಾಯಕ ವಿನಾಯಕನ್ ಕಾಣಿಸಿಕೊಂಡು, ‘ನನ್ನ ಕೊಂದೇ ಬಿಟ್ಟೆ ಅಂತ ನೆಮ್ಮದಿಯಾಗಿ ಇರಕ್ಕಾಗಲ್ಲ ಜೈಲರ್. ನನ್ನ ಹಿಂದೆ ಒಂದು ದೊಡ್ಡ ಪ್ರಪಂಚನೇ ಇದೆ. ಇದೊಂದು ದೊಡ್ಡ ನೆಟ್‌ವರ್ಕ್’ ಎಂದು ಗುಡುಗಿದ್ದು, ‘ಯಾರ‌್ಯಾರು ಯಾವಾಗ ಬರುತ್ತಾರೆ ಎಂದು ನಿನಗೆ ಗೊತ್ತೇ ಆಗಲ್ಲ’ ಎಂಬ ಡೈಲಾಗ್ ‘ಜೈಲರ್ 2’ನಲ್ಲಿ ಮತ್ತಷ್ಟು ಕಲಾಬಳಗ ಇರಲಿದೆ ಎಂಬ ಸುಳಿವು ಬಿಟ್ಟುಕೊಟ್ಟಿದೆ. ಬಳಿಕ ಹಲವು ಹೊಸ ಮುಖಗಳು ಹಾದುಹೋಗಿದ್ದು, ಪ್ರಮುಖ ನಟ-ನಟಿಯರನ್ನು ಪ್ರೊಮೋದಲ್ಲಿ ತೋರಿಸಿಲ್ಲ. ಟೀಸರ್‌ಗೆ ‘ಒಂದು ಹೆಸರು ಇಡೀ ಆಟ ಆಡಿಸುತ್ತದೆ’ ಎಂಬ ಅಡಿಬರಹ ಬರೆಯಲಾಗಿದ್ದು, ಅನಿರುದ್ಧ ಸಂಗೀತದಲ್ಲಿ ಮೂಡಿಬಂದಿದೆ. 2023ರಲ್ಲಿ ತೆರೆಕಂಡಿದ್ದ ‘ಜೈಲರ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ರಜಿನಿಕಾಂತ್ ಜತೆಗೆ ರಮ್ಯ ಕೃಷ್ಣನ್, ಶಿವರಾಜಕುಮಾರ್, ಮೋಹನ್ ಲಾಲ್, ಮಿರ್ಣಾ ಮೆನನ್, ಯೋಗಿ ಬಾಬು, ಹೃತಿಕ್ ರೋಷನ್, ಮೇಘನಾ ರಾಜ್ ಕಲಾಬಳಗದಲ್ಲಿದ್ದಾರೆ.

ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ

ಈ ಬಾರಿಯ ದಸರಾಕ್ಕೆ ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರಲಿವೆ. ಈಗಾಗಲೇ, ‘ಜೈಲರ್ 2’ ಘೋಷಣೆಯಾಗಿದೆ. ಹಾಗೆಯೇ ಚಿರಂಜೀವಿ ನಟನೆಯ ತೆಲುಗಿನ ಬಹುನಿರೀಕ್ಷಿತ ‘ವಿಶ್ವಂಭರ’ ಕೂಡ ದಸರಾಕ್ಕೆ ಬರಲು ಸಜ್ಜಾಗುತ್ತಿದೆ. ಈ ಚಿತ್ರ ಪೂರ್ಣಗೊಂಡು ಒಂದು ವರ್ಷವೇ ಕಳೆದಿದೆ. ಆದರೆ ಕಾರಣಾಂತರಗಳಿಂದ ಪದೇ ಪದೆ ರಿಲೀಸ್ ಡೇಟ್ ಮುಂದೂಡಲಾಗುತ್ತಿದೆ. ಇದೀಗ ದಸರಾಕ್ಕೆ ಬರಲು ಪ್ಲ್ಯಾನ್ ಮಾಡಿದೆ ಎಂದು ತಿಳಿದುಬಂದಿದೆ. ಹಾಗೆಯೇ, ರಜಿನಿಕಾಂತ್ ಮಾಜಿ ಅಳಿಯ, ನಟ ಧನುಷ್ ಅಭಿನಯದ ‘ಓಂ’ ಕೂಡ ದಸರಾ ಮೇಲೆ ಕಣ್ಣಿಟ್ಟಿದೆ. ಇನ್ನು ಕನ್ನಡದಲ್ಲಿ ನಟ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಅ. 16ಕ್ಕೆ ಬಿಡುಗಡೆಯಾಗುತ್ತಿದೆ. ಈ ಮೂಲಕ ‘ಜೈಲರ್’ಗೆ ಸೆಡ್ಡುಹೊಡೆಯಲು ಚಿರು, ಗಣೇಶ್, ಧನುಷ್ ಸಿದ್ಧರಾಗುತ್ತಿದ್ದಾರೆ. ಇದಕ್ಕೂ ಮುನ್ನ ಅ. 2ಕ್ಕೆ ಕನ್ನಡದಲ್ಲಿ ‘ಪಿನಾಕ’, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಅಭಿನಯದ ‘ಆದರ್ಶ ಕುಟುಂಬಂ’ ರಿಲೀಸ್ ಆಗಲಿವೆ.