ಬೆಂಗಳೂರು: ನಟಿ ಮೇಘನಾ ರಾಜ್ ತಮ್ಮ ಪತಿ ದಿವಂಗತ ಚಿರಂಜೀವಿ ಸರ್ಜಾ ಅವರ ಪುಣ್ಯತಿಥಿಯಂದು ಅವರೊಂದಿಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಪುಣ್ಯತಿಥಿ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್ಹೌಸ್ನಲ್ಲಿರುವ ಚಿರು ಸಮಾಧಿಗೆ ಇಡೀ ಕುಟುಂಬ ಭೇಟಿ ನೀಡಿ ಪುಷ್ಪಾರ್ಚನೆ ಮಾಡಿದೆ. ಇದಕ್ಕೂ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಚಿರುವನ್ನು ಹಿಂದಿನಿಂದ ತಬ್ಬಿಕೊಂಡ ಫೋಟೋವನ್ನು ಹಂಚಿಕೊಂಡಿರುವ ಮೇಘನಾ ರಾಜ್, ‘ನನ್ನ ನಿನ್ನೆ, ಇಂದು ಹಾಗೂ ನಾಳೆಗಳು ನೀನೆʼ ಎಂದು ಭಾವುಕರಾಗಿ ಸಾಲುಗಳನ್ನು ಬರೆದಿದ್ದಾರೆ. ಈ ಪೋಸ್ಟ್ಗೆ ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು ಫೋಟೋ ಮತ್ತು ಮೇಘನಾ ರಾಜ್ ಬರೆದ ಸಾಲುಗಳು ನಿಜಕ್ಕೂ ಭಾವುಕವಾಗಿದೆ. "ಚಿರು ಶಾಶ್ವತ" ಎಂದು ಕಾಮೆಂಟ್ ಮಾಡಿದ್ದಾರೆ.
ಚಿರಂಜೀವಿ ಸರ್ಜಾ ಅವರು 2020, ಜೂನ್ 7ರಂದು ಹೃದಯಾಘಾತದಿಂದ ಹಠಾತ್ತಾಗಿ ನಿಧನರಾದರು. ಚಿರು ಮೃತ ಪಡುವಾಗ ಮೇಘನಾ ಪ್ರೆಗ್ನೆಂಟ್ ಆಗಿದ್ದರು. ಚಿರು ಮೃತಪಟ್ಟ ಕೆಲ ತಿಂಗಳ ನಂತರ ಮೇಘನಾಗೆ ಗಂಡುಮಗು ಜನಿಸಿತು. ನಟ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ ಮೂರು ವರ್ಷ ಕಳೆದಿದೆ.