ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ  
ನ್ಯೂಸ್

ಡಿ.5ರಂದು ಬಸವ ಕೇಂದ್ರದ ಶ್ರೀಗೆ ಚಿನ್ಮಯಾನುಗ್ರಹ ದೀಕ್ಷೆ

ಶಿವಮೊಗ್ಗ: ಚಿಕ್ಕಮಗಳೂರು ಬಸವ ಕೇಂದ್ರದ ಶ್ರೀ ಬಸವತತ್ವ ಪೀಠಾಧೀಶ ಶ್ರೀ ಡಾ. ಬಸವಮರುಳಸಿದ್ಧ ಸ್ವಾಮೀಜಿ ಅವರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಮತ್ತು ಬಹಿರಂಗ ಅಧಿವೇಶನವನ್ನು ಡಿ.5ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ವೆಂಕಟೇಶನಗರದ ಬಸವ ಕೇಂದ್ರದಲ್ಲಿ ಶ್ರೀಗಳಿಗೆ ಬೆಳಗ್ಗೆ 5ಕ್ಕೆ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಲಿಂಗ ಹಸ್ತದಿಂದ ಅನುಗ್ರಹಿಸುವರು. ಹುಬ್ಬಳ್ಳಿ-ನಿಡೋಣಿ ಎರಡೆತ್ತಿನ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಗುತ್ತಲ ಕಲ್ಮಠದ ಶ್ರೀ ಪ್ರಭು ಸ್ವಾಮೀಜಿ, ಅಕ್ಕಿಆಲೂರು ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಷಡುಸ್ಥಲ ಮೂರ್ತಿಗಳಾಗಿ ಉಪಸ್ಥಿತರಿರುವರು ಎಂದು ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭದ ಕಾರ್ಯಕಾರಿ ಸಮಿತಿ ಪ್ರಮುಖ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಸವ ಬೆಳವಿ ಶ್ರೀ ಚರಂತೇಶ್ವರ ಮಠದ ಶ್ರೀ ಬಸವ ದೇವರು ಒಳಗೊಂಡಂತೆ ನಾಡಿನ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುವರು.  ಬೆಳಗ್ಗೆ 11ಕ್ಕೆ ಮಾಚೇನಹಳ್ಳಿ ಡೈರಿ ಬಳಿ ಬಸವ ನೆಲೆಯಲ್ಲಿ ಬಹಿರಂಗ ಅಧಿವೇಶನವನ್ನು ಮಾಜಿ ಸಿಎಂ ಬಿ.ಎಸ್.ಯಡಿಯರಪ್ಪ ಉದ್ಘಾಟಿಸುವರು. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶೇಷ ಅತಿಥಿಗಳಾಗಿದ್ದು ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ ವಿಶೇಷ ಉಪನ್ಯಾಸ ನೀಡುವರು ಎಂದರು.

ಬೆಕ್ಕಿನ ಕಲ್ಮಠದ ಸ್ವಾಮೀಜಿ, ನಿಟ್ಟೂರು ಶ್ರೀ ಬಹ್ಮಶ್ರೀ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಕಡೂರು ಯಳನಾಡು ಮಠದ ಶ್ರೀ ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ನಾಡಿನ ಹಲವು ಸ್ವಾಮೀಜಿಗಳು, ಮಠಾಧೀಶರ ಸಮ್ಮುಖ ವಹಿಸುವರು. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಎಲ್ಲ ಶಾಸಕರು, ಎಂಎಲ್‌ಸಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಹೇಳಿದರು.

ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಪ್ರಮುಖರಾದ ಎಚ್.ಸಿ.ಯೋಗೇಶ್, ಎಸ್.ಪಿ.ದಿನೇಶ್, ಕಿರಣ್‌ಕುಮಾರ್, ವಿಜಯಕುಮಾರ್, ಬಾಳೆಕಾಯಿ ಮೋಹನ್, ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.