ನ್ಯೂಸ್

ಬಂಧನಕ್ಕೊಳಗಾಗುತ್ತಿದ್ದಂತೆ ಕರಗಿತು ಏಳು ಸಾವಿರ ಕೋಟಿ ರೂ. ಸಂಪತ್ತು...!

ನವದೆಹಲಿ: ಸಾವಿರಾರು ಕೋಟಿ ರೂ. ಸಂಪತ್ತಿನ ಒಡೆಯನಾಗಿದ್ದ. ಪೊಲೀಸರಿಂದ ಬಂಧನಕ್ಕೆ ಒಳಗಾಗುತ್ತಿದ್ದಂತೆ ಆತನ ಸಂಪತ್ತು ಏಳು ಸಾವಿರ ಕೋಟಿ ರೂ. ಕರಗಿ ಹೋಯಿತು.

ಹೌದು... ಇದು ಚೀನಾದ ಎಂಟನೇ ಅತಿ ದೊಡ್ಡ ರಿಯಲ್​ ಎಸ್ಟೇಟ್​ ಕಂಪನಿ ಸೀಝೆನ್​ ಮಾಲೀಕ ವಾಂಗ್​ ಜೆನ್​ಹುವಾ ಕಥೆ. ಈತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಏಕೆಂದರೆ, ಈತನಿಗೆ ಚೀನಾದ ಕೋರ್ಟ್​ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ; ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಪತ್ತೆ ಹಚ್ಚಿದೆ ಅಮೆರಿಕ ಗುಪ್ತಚರ ಸಂಸ್ಥೆ

ಕಳೆದ ಜುಲೈನಲ್ಲಿ ವಾಂಗ್​ ವಿರುದ್ಧ ಮಕ್ಕಳ ಮೇಲೆ ದೌರ್ಜನ್ಯ ಆರೋಪ ಹೊರಿಸಲಾಗಿತ್ತು. ಇದಾಗುತ್ತಿದ್ದಂತೆ ಎಂಟನೇ ಸ್ಥಾನದಲ್ಲಿದ್ದ ಕಂಪನಿ 13ನೇ ಸ್ಥಾನಕ್ಕಿಳಿಯಿತು. ಷೇರುದಾರರು ತನ್ನ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ತನ್ನ ಮಗನನ್ನು ಕಂಪನಿಯ ಮುಖ್ಯಸ್ಥನಾಗಿಸಿದ.

ಸತತ ಎರಡು ದಿನಗಳವರೆಗೆ ವಿಚಾರಣೆ ನಡೆಸಿದ ಕೋರ್ಟ್​ ವಾಂಗ್​ ತಪ್ಪಿತಸ್ಥ ಎಂದು ಘೋಷಿಸಿ ಐದು ವರ್ಷಗಳ ಶಿಕ್ಷೆ ವಿಧಿಸಿದೆ. ಮಕ್ಕಳ ದೌರ್ಜನ್ಯದಲ್ಲಿ ವಿಧಿಸಲಾಗುವ ಗರಿಷ್ಠ ಶಿಕ್ಷೆ ಇದಾಗಿದೆ.

ಕೋರ್ಟ್​ ತೀರ್ಪಿನ ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಂಪನಿಯ ಷೇರು ಮೌಲ್ಯ ಪಾತಾಳಕ್ಕೆ ಕುಸಿದಿದೆ. ಈತನ ಸಂಪತ್ತಿನ ಮೌಲ್ಯ 6.6 ಬಿಲಿಯನ್​ ಡಾಲರ್​ಗಳಿಂದ ಕುಸಿದು 5.7 ಬಿಲಿಯನ್​ ಡಾಲರ್​ಗೆ ಇಳಿದಿದೆ. ಇನ್ನಷ್ಟು ಕೆಳಕ್ಕೆ ಕುಸಿಯುವ ಭೀತಿ ಎದುರಾಗಿದೆ.