ನ್ಯೂಸ್

'ಭಾರತೀಯ ಕರೊನಾ ಲಸಿಕೆ ಕಂಪೆನಿಗಳ ಹಿಂದೆ ಬಿದ್ದಿದ್ದಾರೆ ಚೀನಾದ ಹ್ಯಾಕರ್​ಗಳು'

ನವದೆಹಲಿ: ಕಳೆದ ಕೆಲವು ವಾರಗಳಲ್ಲಿ, ಚೀನಾ ಸರ್ಕಾರದ ಬೆಂಬಲ ಹೊಂದಿರುವ ಹ್ಯಾಕರ್​​ಗಳು ಭಾರತದ ಎರಡೂ ಕರೊನಾ ಲಸಿಕೆ ತಯಾರಿಕಾ ಕಂಪೆನಿಗಳ ಐಟಿ ಸಿಸ್ಟಮ್​ಗಳನ್ನು ಹ್ಯಾಕ್ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಸೈಫರ್ಮಾ ಎಂಬ ಸೈಬರ್ ಇಂಟೆಲಿಜೆನ್ಸ್ ಕಂಪೆನಿ ವರದಿ ನೀಡಿದೆ. ಚೀನಾದ ಸ್ಟೋನ್ ಪಾಂಡ ಎಂದೂ ಕರೆಯಲಾಗುವ ಎಪಿಟಿ10 ಹ್ಯಾಕಿಂಗ್ ಗುಂಪು ಭಾರತದ ಸೀರಮ್ ಇನ್ಸ್​ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್​​ಗಳನ್ನು ಟಾರ್ಗೆಟ್​ ಮಾಡಿಕೊಂಡಿವೆ ಎನ್ನಲಾಗಿದೆ.

ಗೋಲ್ಡ್​ಮನ್ ಸಾಚ್ಸ್ ನಡೆಸುವ ಸೈಫರ್ಮಾ ಕಂಪೆನಿಯ ಮುಖ್ಯ ಅಧಿಕಾರಿ ಕುಮಾರ್ ರಿತೇಶ್ ಈ ಬಗ್ಗೆ ಮಾಹಿತಿ ನೀಡಿದ್ದು, "ಇದರ ಹಿಂದಿನ ನಿಜವಾದ ಉದ್ದೇಶ ಬೌದ್ಧಿಕ ಆಸ್ತಿಯನ್ನು ಹೊರಹಾಕುವುದು ಮತ್ತು ಭಾರತೀಯ ಔಷಧೀಯ ಕಂಪನಿಗಳ ಮೇಲೆ ಸ್ಪರ್ಧಾತ್ಮಕ ಲಾಭವನ್ನು ಪಡೆಯುವುದೇ ಆಗಿದೆ" ಎಂದಿದ್ದಾರೆ. ಈ ಹ್ಯಾಕರ್​ಗಳು ಭಾರತದ ಸೀರಮ್ ಇನ್ಸ್​ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್​​ನ ಐಟಿ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿಯಲ್ಲಿರುವ ಅಂತರಗಳು ಮತ್ತು ದುರ್ಬಲತೆಗಳನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ ಲಸಿಕೆಗೆ ಸಂಬಂಧಿಸಿದ ಯಾವ ಮಾಹಿತಿಯನ್ನು ಎಪಿಟಿ10 ಭಾರತೀಯ ಕಂಪೆನಿಗಳಿಂದ ಕದ್ದಿವೆ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ.

ಎಪಿಟಿ10 ಆಸ್ಟ್ರಜೆನೆಕಾದ ಕರೊನಾ ಲಸಿಕೆಯನ್ನು ಭಾರತ ಸೇರಿ ಹಲವಾರು ದೇಶಗಳಿಗಾಗಿ ತಯಾರಿಸುತ್ತಿರುವ ಸೀರಮ್ ಇನ್ಸ್​ಟಿಟ್ಯೂಟ್ಅನ್ನು ಬೇಕೆಂತಲೇ ಟಾರ್ಗೆಟ್ ಮಾಡುತ್ತಿದೆ. ಅದರ ಹಲವು ಪಬ್ಲಿಕ್ ಸರ್ವರ್​ಗಳು ದುರ್ಬಲವಾಗಿ ನಡೆಯುತ್ತಿರುವುದನ್ನು ಅವರು ಕಂಡುಕೊಂಡಿದ್ದಾರೆ. ದುರ್ಬಲ ವೆಬ್ ಅಪ್ಲಿಕೇಶನ್ ಮತ್ತು ದುರ್ಬಲ ಕಂಟೆಂಟ್ ಮ್ಯಾನೇಜ್​ಮೆಂಟ್ ಬಗ್ಗೆ ಅವರು ಮಾತಾಡಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ ಎಂದು ಡೆಸಿಫೆರ್ ಟೂಲ್​ನ ಮೂಲಕ ಹ್ಯಾಕರ್​ಗಳನ್ನು ಗಮನಿಸುತ್ತಿರುವ ಸೈಫರ್ಮಾ ಮುಖ್ಯಸ್ಥ ರಿತೇಶ್ ಹೇಳಿದ್ದಾರೆ.

ಈ ಮುನ್ನ ನವೆಂಬರ್​ನಲ್ಲಿ ಮೈಕ್ರೋಸಾಫ್ಟ್ ಕಂಪೆನಿಯು, ಭಾರತ, ಅಮೆರಿಕ ಸೇರಿದಂತೆ ಮತ್ತೆ ಕೆಲವು ದೇಶಗಳಲ್ಲಿರುವ ಕರೊನಾ ಲಸಿಕೆ ಕಂಪೆನಿಗಳ ಮೇಲೆ ರಷಿಯಾ ಮತ್ತು ಉತ್ತರ ಕೊರಿಯಾ ದೇಶಗಳು ಸೈಬರ್ ಅಟ್ಯಾಕ್​ ನಡೆಸುತ್ತಿವೆ ಎಂದು ಆರೋಪಿಸಿತ್ತು ಎನ್ನಲಾಗಿದೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ