Ajit Doval: ಭಾರತ ಮತ್ತು ಚೀನಾ ಗಡಿ ಸಮಸ್ಯೆಯ ಕುರಿತು ವಿಶೇಷ ಪ್ರತಿನಿಧಿಗಳ ಕಾರ್ಯವಿಧಾನದ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಮಾತುಕತೆ ನಡೆಸಲು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮುಂದಿನ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನಯಾನ ಪುನರಾರಂಭಗೊಳ್ಳಬಹುದು ಎಂದು ವರದಿಯಾಗಿದೆ. ಅಲ್ಲದೆ, ಆಗಸ್ಟ್ 31 ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.
2020 ರ ಗಾಲ್ವಾನ್ ಗಡಿ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಎರಡೂ ತಮ್ಮ ಸಂಬಂಧಗಳನ್ನು ನಿರ್ಮಿಸಲು ಶ್ರಮಿಸುತ್ತಿರುವಾಗ ಚೀನಾದ ವಿದೇಶಾಂಗ ಸಚಿವ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಕಳೆದ ತಿಂಗಳು, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು SCO ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ಸಮಯದಲ್ಲಿ, ವಿದೇಶಾಂಗ ಸಚಿವ ಅವರು ತಮ್ಮ ಚೀನಾದ ಸಚಿವ ವಾಂಗ್ ಯಿ ಅವರನ್ನು ಸಹ ಭೇಟಿಯಾದರು.
ಅಲ್ಲದೆ, ಇಎಎಂ ಜೈಶಂಕರ್ ಅವರ ಭೇಟಿಗೂ ಮುನ್ನ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಜೂನ್‌ನಲ್ಲಿ ನಡೆದ ಎಸ್‌ಸಿಒ ರಕ್ಷಣಾ ಸಚಿವರ ಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ಭೇಟಿ ನೀಡಿದ್ದರು.
ಭಾರತ ಮತ್ತು ಚೀನಾ ನಡುವೆ 2020ರ ಜೂನ್ 15, ರಂದು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಏಳು ಗಂಟೆಗಳ ಕಾಲ ನಡೆದ ಮಾರಕ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದರು. ಇದರಲ್ಲಿ ಒಬ್ಬ ಕಮಾಂಡಿಂಗ್ ಅಧಿಕಾರಿ ಕೂಡ ಸೇರಿದ್ದರು.
ಚೀನಾ ಆರಂಭದಲ್ಲಿ ಸಂಖ್ಯೆಗಳನ್ನು ಬಹಿರಂಗಪಡಿಸದೆ ಸಾವುನೋವುಗಳನ್ನು ಮಾತ್ರ ಒಪ್ಪಿಕೊಂಡಿದ್ದರೂ, ವರದಿಗಳು ಚೀನಾದ ಸೈನ್ಯವು ಭಾರತಕ್ಕಿಂತ ಎರಡು ಪಟ್ಟು ಹೆಚ್ಚು ಸಾವುನೋವುಗಳನ್ನು ಅನುಭವಿಸಿರಬಹುದು ಎಂದು ಹೇಳಿವೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಈ ಘರ್ಷಣೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೇಡಿಸಿತ್ತು.
ಭಾರತ ಮತ್ತು ಚೀನಾ ಸಂಬಂಧಗಳನ್ನು ಪುನಃಸ್ಥಾಪಿಸುವ ಪ್ರಯತ್ನವಾಗಿ, ಉಭಯ ದೇಶಗಳು ಪೂರ್ವ ಲಡಾಖ್ ಮತ್ತು ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡವು.(ಏಜೆನ್ಸೀಸ್)