ನವದೆಹಲಿ: ಗಲ್ವಾನ್ ಗಡಿ ತಂಟೆ ಬಳಿಕ ಚೀನಾ ಮೂಲದ 59 ಆಪ್ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ಚೀನಾ ಕಂಪನಿಗಳು, ಇಂಥ ಕಂಪನಿಗಳ ಜತೆ ಸಹಯೋಗ ಹೊಂದಿರುವ ಸಂಸ್ಥೆಗಳನ್ನು ನಿರ್ಬಂಧಿಸಲು ಗಂಭೀರ ಚಿಂತನೆ ನಡೆದಿದೆ.
ವಿದ್ಯುತ್ ಮತ್ತು ಟೆಲಿಕಾಂ ವಲಯದಲ್ಲಿ ಚೀನಾ ಕಂಪನಿಗಳ ಭಾಗವಹಿಸುವಿಕೆಯನ್ನು ನಿರ್ಬಂಧಿಸುವ ಅಥವಾ ಅವುಗಳ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಭದ್ರತಾ ಸಂಸ್ಥೆಗಳು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದವು. ಈ ಪ್ರಕಾರ ಹಲವು ಕ್ರಮಗಳನ್ನು ಸರ್ಕಾರ ಈಗಾಗಲೇ ಪ್ರಕಟಿಸಿದೆ. ಶಿಕ್ಷಣ ಕ್ಷೇತ್ರದಲ್ಲಿನ ಚೀನಾ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅನೇಕ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಚೀನಾದ ಶೈಕ್ಷಣಿಕ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಆದರೆ, ಇದಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆದಿಲ್ಲ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೀಡಿರುವ ಭದ್ರತಾ ಸಂಸ್ಥೆಗಳು, ದೆಹಲಿಯಲ್ಲಿ ಚೀನಿ ಭಾಷೆ ಮತ್ತು ಸಂಸ್ಕೃತಿ ಉತ್ತೇಜನ ನೀಡಲು ಕನ್ಫ್ಯೂಷಿಯಸ್ ಸಂಸ್ಥೆ ಜತೆ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳಿಗೆ ಚೀನಾ ಸರ್ಕಾರ ಧನಸಹಾಯ ಮಾಡುತ್ತಿದೆ ಎಂದು ತಿಳಿಸಿವೆ.
ಚೀನಾ ಶೈಕ್ಷಣಿಕ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವುದಕ್ಕೂ ಮುನ್ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಗೃಹ, ವಿದೇಶಾಂಗ ಸಚಿವಾಲಯಗಳಿಂದ ಅನುಮತಿ ಪಡೆದುಕೊಳ್ಳಬೇಕು. ಈ ಕುರಿತಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಕಳೆದ ವರ್ಷ ಅಕ್ಟೋಬರ್ನಲ್ಲಿ ಎಲ್ಲ ವಿವಿಗಳಿಗೆ ನೆನಪೋಲೆ ಬರೆದಿತ್ತು.
ಗಡಿ ಬದಲಾವಣೆ ಒಪು್ಪವುದಿಲ್ಲ
ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್ಎಸಿ) ನಾವು ಗೌರವಿಸುತ್ತೇವೆ. ಆದರೆ, ಗಡಿಯಲ್ಲಿನ ಯಥಾಸ್ಥಿತಿ ಬದಲಿಸುವಂತಹ ಯಾವುದೇ ಪ್ರಯತ್ನವನ್ನು ಒಪು್ಪವುದಿಲ್ಲ ಎಂದು ಚೀನಾಕ್ಕೆ ಭಾರತ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಎಲ್ಎಸಿಯಲ್ಲಿ ಸೇನೆ ಹಿಂಪಡೆಯುವಿಕೆ ಕಾರ್ಯದಲ್ಲಿ ಭಾರತದೊಂದಿಗೆ ಚೀನಾ ಪ್ರಾಮಾಣಿಕವಾಗಿ ಸಹಕರಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಹೇಳಿದ್ದಾರೆ.
ಚೀನಾದಿಂದ ಹೊಸ ಕ್ಯಾತೆ ಸಾಧ್ಯತೆ
ಚಳಿಗಾಲದ ಸಮಯದಲ್ಲಿ ಉಂಟಾಗುವ ಹಿಮಪಾತ ಮತ್ತು ಪ್ರವಾಹದ ಸಮಯದಲ್ಲಿ ಭಾರತ ವಿರುದ್ಧ ಮತ್ತೊಂದು ರೀತಿ ದಾಳಿ ಮಾಡಲು ಚೀನಾ ಯತ್ನಿಸುವ ಸಾಧ್ಯತೆ ಇದೆ. ಕರೊನಾ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಅದು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಭಾರತ ಈ ಮಳೆಗಾಲ ಮತ್ತು ಚಳಿಗಾಲದಲ್ಲಿ ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೇನೆಯ ನಿವೃತ್ತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭೂತಾನ್ಗೆ ಹೊಸ ವ್ಯಾಪಾರ ಮಾರ್ಗ
ಭೂತಾನ್ನಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುವ ಚೀನಾ ವಿರುದ್ಧ ಭಾರತ ಪ್ರತಿತಂತ್ರ ರೂಪಿಸಿದೆ. ಗಡಿಯಲ್ಲಿ ಹೊಸ ವ್ಯಾಪಾರ ಪಾಯಿಂಟ್ಗಳನ್ನು ತೆರೆಯುವುದು ಮತ್ತು ಹೊಸ ರೈಲು ಮಾರ್ಗ ನಿರ್ವಣದ ಕಾರ್ಯಸಾಧ್ಯತೆ ಕುರಿತ ಪ್ರಸ್ತಾಪವೊಂದನ್ನು ಮುಂದಿಟ್ಟಿದೆ. ಭೂತಾನ್ ಕಳೆದ ವಾರ ಮಂಡಿಸಿದ್ದ ಶಾಶ್ವಾತ ಸುಂಕಠಾಣೆ (ಎಲ್ಸಿಎಸ್) ತೆರೆಯುವ ಪ್ರಸ್ತಾಪಕ್ಕೆ ಭಾರತ ಒಪ್ಪಿಗೆ ಸೂಚಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಸಮಗ್ರ ಗಡಿ ಚೌಕಿ (ಐಸಿಪಿ) ತೆರೆಯುವ ಬಗ್ಗೆಯೂ ಭಾರತ ಚಿಂತನೆ ನಡೆಸಿದೆ. ಚೀನಾದ ಪ್ರಭಾವಕ್ಕೆ ಒಳಗಾಗುತ್ತಿರುವ ನೆರೆಯ ಬಾಂಗ್ಲಾದೇಶದ ಜತೆಗೂ ರಫ್ತು ವಹಿವಾಟು ಹೆಚ್ಚಿಸುವ ಬಗ್ಗೆ ಭಾರತ ಚಿಂತನೆ ನಡೆಸುತ್ತಿದೆ.
ಚೀನಾದ ಮೂವರು ಪತ್ರಕರ್ತರು ಗಡಿಪಾರು
ಚೀನಾದ ಕ್ಸಿನ್ಹುವಾ ವಾರ್ತಾ ಸಂಸ್ಥೆಯ ಮೂವರು ಪತ್ರಕರ್ತರನ್ನು ಗಡಿಪಾರು ಮಾಡಲಾಗಿದೆ. ಈ ಮೂವರ ನಡೆ ಸಂಶಯಾಸ್ಪದವಾಗಿದೆ ಎಂದು ಗುಪ್ತಚರ ಸಂಸ್ಥೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ಮೂವರು ನಕಲಿ ಗುರುತು ಪತ್ರದ ಮೂಲಕ ಇನ್ನೊಬ್ಬರ ಹೆಸರಿನಲ್ಲಿ ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡಲು ಪ್ರಯತ್ನಿಸಿದ್ದರು. ಹೀಗಾಗಿ ಈ ಪತ್ರಕರ್ತರ ವೀಸಾವನ್ನು ಸರ್ಕಾರ ರದ್ದು ಮಾಡಿದೆ. ದೆಹಲಿಯಲ್ಲಿರುವ ಕ್ಸಿನ್ಹುವಾದ ಬ್ಯೂರೊ ಮುಖ್ಯಸ್ಥ ವು ಕಿಯಾಂಗ್ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲು ಟಾಂಗ್ ಮತ್ತು ಶಿ ಯಾಂಗ್ಗಾಂಗ್ ಅವರಿಗೆ ಜುಲೈ 31ರೊಳಗೆ ಭಾರತದಿಂದ ಹೋಗುವಂತೆ ಸೂಚಿಸಲಾಗಿದೆ. ವು ಕಿಯಾಂಗ್ ಆರು ವರ್ಷದಿಂದ ದೆಹಲಿಯಲ್ಲಿದ್ದರು. ಇತ್ತೀಚೆಗೆ ಅವರ ವೀಸಾವನ್ನು ನವೀಕರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.