ನ್ಯೂಸ್

ವಿದ್ಯುತ್ ಗುತ್ತಿಗೆಯಿಂದ ಚೀನಾ ಕಂಪನಿ ಹೊರಕ್ಕೆ? ದೇಶೀಯ ವಿತರಣಾ ಜಾಲದಲ್ಲಿ ಅಧಿಪತ್ಯ

ನವದೆಹಲಿ: ಚೀನಾ ಮೂಲದ 59 ಆಪ್​ಗಳ ನಿಷೇಧ, ವಿವಿಧ ಕಾಮಗಾರಿಯಲ್ಲಿ ಚೀನಾ ಕಂಪನಿ ಇಲ್ಲವೆ ಅವುಗಳಿಂದ ಸಹಯೋಗ ಹೊಂದಿರುವ ಸಂಸ್ಥೆಗಳನ್ನು ಹೊರ ಹಾಕುತ್ತಿರುವ ಕೇಂದ್ರ ಸರ್ಕಾರ, ಈಗ ವಿದ್ಯುತ್ ಕ್ಷೇತ್ರದಲ್ಲಿ ಆಳವಾಗಿ ಬೇರುಬಿಟ್ಟಿರುವ ಚೀನಿ ಕಂಪನಿಗಳನ್ನು ಹೊರ ದಬ್ಬಲು ಮುಂದಾಗಿದೆ. ಚೀನಿ ಕಂಪನಿಗಳು ಮಹತ್ವದ ವಿದ್ಯುತ್ ಕ್ಷೇತ್ರದಲ್ಲಿ ನಿಧಾನವಾಗಿ ಒಳ ನುಗ್ಗುತ್ತಿವೆ ಎಂದು ಕೈಗಾರಿಕಾ ವಲಯದ ಅಂಕಿಸಂಖ್ಯೆಗಳಿಂದ ತಿಳಿದು ಬಂದಿದೆ. 2016ರಿಂದ ಈ ವರ್ಷದ ಮಾರ್ಚ್ ನಡುವೆ ರಾಷ್ಟ್ರೀಯ ಜಾಲದ (ಗ್ರಿಡ್) ಕೆಲವು ಭಾಗಗಳು ಮತ್ತು 46 ನಗರಗಳ ಗ್ರಿಡ್​ಗಳಲ್ಲಿ ನಿಯಂತ್ರಣ ವ್ಯವಸ್ಥೆಗಳನ್ನು ಸ್ಥಾಪಿಸುವ ಗುತ್ತಿಗೆಗಳನ್ನು ಚೀನಿ ಕಂಪನಿಗಳು ಪಡೆದಿರುವುದರಿಂದ ಅವುಗಳನ್ನು ಹಠಾತ್ತನೆ ಕೈ ಬಿಡುವುದು ಅಷ್ಟು ಸರಳವಲ್ಲ ಎನ್ನಲಾಗಿದೆ. ಹಾಗೇನಾದರೂ ಮಾಡಿದಲ್ಲಿ ದೇಶದ ವಿದ್ಯುತ್ ಕ್ಷೇತ್ರದ ಮೇಲೆ ದುಷ್ಪರಿಣಾಮ ಉಂಟಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಯಾವ ಕಂಪನಿ-ಯಾವ ಗುತ್ತಿಗೆ?: ಚೆಂಗ್ದು ಮೂಲದ ಡಾಂಗ್​ಫಂಗ್ ಇಲೆಕ್ಟ್ರಿಕ್ ಕಾರ್ಪೋರೇಷನ್ ಭಾರತದ ಐದು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 23 ನಗರಗಳ ಮೇಲುಸ್ತುವಾರಿ ನಿಯಂತ್ರಣ ಹಾಗೂ ದತ್ತಾಂಶ ಸಂಗ್ರಹ (ಎಸ್​ಸಿಎಡಿಎ-ಸ್ಕಡಾ) ಗುತ್ತಿಗೆ ಪಡೆದಿದೆ. ಜಡ್​ಟಿಟಿ, ಶೆನ್​ಜೆನ್, ಎಸ್​ಡಿಜಿ ಮಾಹಿತಿ ಕಂಪನಿ ಮತ್ತು ತೊಂಗುವಾನ್ ಸಮೂಹ ಒಟ್ಟಾಗಿ 23 ಗುತ್ತಿಗೆಗಳನ್ನು ಪಡೆದಿವೆ. ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿಗಳು ಹಾಗೂ ಪವರ್ ಗ್ರಿಡ್ ಜೊತೆ ಅವು ಒಪ್ಪಂದ ಮಾಡಿಕೊಂಡಿವೆ.

ಬಲೂಚಿ ಹೋರಾಟದಿಂದ ಹಾನಿ: ಪಾಕಿಸ್ತಾನದಲ್ಲಿನ ಬಲೂಚಿ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಮಾರಕ ಆಕ್ರಮಣದಿಂದ ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಮತ್ತು ರಸ್ತೆ ಯೋಜನೆಗೆ ಅಪಾರ ಹಾನಿ ಆಗುತ್ತಿದೆ. ಚೀನಾ ನಿರ್ವಹಿಸುವ ಗ್ವದಾರ್ ಬಂದರು ಗಲಭೆಪೀಡಿತ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವುದರಿಂದ ಆತಂಕ ಎದುರಾಗಿದೆ. 45 ಲಕ್ಷ ಕೋಟಿ ರೂಪಾಯಿ ಮೊತ್ತದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ ಉಗ್ರರ ದಾಳಿಗಳು ಹಾನಿಯುಂಟು ಮಾಡಲಿವೆ ಎಂಬ ಆತಂಕ ಚೀನಾವನ್ನು ಕಾಡುತ್ತಿದೆ.

ವಾಯುಪಡೆ ಮುಖ್ಯಸ್ಥರ ಸಭೆ: ಚೀನಾದೊಂದಿಗೆ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಲಡಾಖ್ ಭಾಗದಲ್ಲಿ ರಫೇಲ್ ಯುದ್ಧ ವಿಮಾನ ನಿಯೋಜಿಸುವ ಸಂಬಂಧ ಭಾರತೀಯ ವಾಯು ಪಡೆಯ ಉನ್ನತ ಕಮಾಂಡರ್​ಗಳು ಜುಲೈ 22ರಂದು ಸಭೆ ನಡೆಸಲಿದ್ದಾರೆ. ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್​ಎಸಿ) ಪರಿಸ್ಥಿತಿಯನ್ನು ರ್ಚಚಿಸಲಿದ್ದಾರೆ. ರಫೇಲ್ ವಿಮಾನಗಳು ತಿಂಗಳಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿವೆ.