ಬೀಜಿಂಗ್: ಚೀನಾದ ಉತ್ತರ ಭಾಗದ ನಗರವೊಂದು ಭಾನುವಾರ ಮತ್ತೊಂದು ಮಾರಕ ಕಾಯಿಲೆ ಹರಡುತ್ತಿರುವ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ! ಸ್ವತಂತ್ರ ಭಾಗವಾಗಿರುವ ಮಂಗೋಲಿಯಾದ ಬಯನ್ನೂರ್ ನಿಂದ ಇಂಥದ್ದೊಂದು ಎಚ್ಚರಿಕೆ ಸಂದೇಶ ಬಂದಿರುವುದಾಗಿ ಸರ್ಕಾರಿ ಸ್ವಾಮ್ಯದ ಪೀಪಲ್'ಸ್ ಡೇಲಿ ಆನ್ಲೈನ್ ವರದಿ ಮಾಡಿದೆ.
ಬಯನ್ನೂರಿನ ಆಸ್ಪತ್ರೆಯಲ್ಲಿ ಶನಿವಾರ ಶಂಕಿತ ಬಬೋನಿಕ್ ಪ್ಲೇಗ್ ಕೇಸ್ ವರದಿಯಾಗಿದ್ದು, ಈ ವರ್ಷದ ಅಂತ್ಯದ ತನಕ ಎಚ್ಚರಿಕೆಯಿಂದ ಇರುವಂತೆ ಸ್ಥಳೀಯ ಆರೋಗ್ಯ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಬಯನ್ನೂರು ನಗರದಲ್ಲಿ ಮನುಷ್ಯರ ನಡುವೆ ಪ್ಲೇಗ್ ಹರಡುವ ಅಪಾಯ ಹೆಚ್ಚಾಗಿದೆ. ಇದಕ್ಕಾಗಿ ಸಾರ್ವಜನಿಕರು ಸ್ವ ರಕ್ಷಣೆಯ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ಕೊಡಿ ಎಂದು ಪ್ರಾಧಿಕಾರಿ ಸಾರ್ವಜನಿಕರಿಗೆ ಸೂಚಿಸಿದೆ.
ಸರ್ಕಾರಿ ಸ್ವಾಮ್ಯದ ಕ್ಸಿನುವಾ ನ್ಯೂಸ್ ಏಜೆನ್ಸಿ ಜುಲೈ 1 ರಂದು ಪ್ರಕಟಿಸಿದ ವರದಿ ಪ್ರಕಾರ, ಪಶ್ಚಿಮ ಮಂಗೋಲಿಯಾದ ಖೋವ್ಡ್ ಪ್ರಾಂತ್ಯದಲ್ಲೂ ಎರಡು ಶಂಕಿತ ಬಬೋನಿಕ್ ಪ್ಲೇಗ್ ಕೇಸ್ಗಳು ವರದಿಯಾಗಿವೆ. ಇದನ್ನು ಅಲ್ಲಿನ ಲ್ಯಾಬ್ಗಳು ಕೂಡ ಖಚಿತಪಡಿಸಿವೆ. 27 ವರ್ಷದ ಯುವಕ ಮತ್ತು ಆತನ 17 ವರ್ಷದ ಸಹೋದರನಲ್ಲಿ ಈ ರೋಗ ಪತ್ತೆಯಾಗಿದ್ದು, ಅವರಿಬ್ಬರನ್ನು ಎರಡು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಿ ಮಾಂಸ ಸೇವಿಸದಂತೆ ನಿಷೇಧದ ಎಚ್ಚರಿಕೆ ಇದ್ದಾಗ್ಯೂ ಈ ಸಹೋದರರು ಅಳಿಲಿನ ಜಾತಿಗೆ ಸೇರಿದ ಮಾರ್ಮೊಟ್ ನ ಮಾಂಸವನ್ನು ಸೇವಿಸಿದ್ದರು. ಇವರ ಜತೆ ಸಂಪರ್ಕ ಹೊಂದಿದ 146 ಜನರನ್ನು ಗುರುತಿಸಿ ಐಸೋಲೇಟ್ ಮಾಡಲಾಗಿದ್ದು, ಅವರನ್ನು ಸ್ಥಳೀಯವಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದು ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದೆ. ಸರಿಯಾದ ಚಿಕಿತ್ಸೆ ಇಲ್ಲದೆ ಇದ್ದರೆ ಎಂಥವರನ್ನೇ ಆದರೂ 24 ಗಂಟೆಯೊಳಗೆ ಕೊಲ್ಲುವ ಶಕ್ತಿ ಇದಕ್ಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ಹಿಂದೆಯೇ ಎಚ್ಚರಿಸಿದೆ. ಇದರ ಗುಣ ಲಕ್ಷಣಗಳು ಈ ರೀತಿ ಇವೆ.