ನ್ಯೂಸ್

ಕ್ವಾರಂಟೈನ್‌ಗೆ ಹೆದರಿ ಮನೆ ಖಾಲಿ ಮಾಡಿದ ಚಿಂಚಲಿ ಗ್ರಾಮಸ್ಥರು!

ರಾಯಬಾಗ (ಬೆಳಗಾವಿ): ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಕರೊನಾ ವೈರಸ್ ಶಂಕಿತರನ್ನು ಕ್ವಾರಂಟೈನ್ ಮಾಡಲಾದ ಸ್ಥಳದ ಸುತ್ತಲಿನ ಸುಮಾರು 20 ಕುಟುಂಬಸ್ಥರು ಭೀತಿಯಿಂದ ಸೋಮವಾರ ಮನೆ ಖಾಲಿ ಮಾಡಿದ್ದಾರೆ!

ತಾಲೂಕಿನ ಕುಡಚಿ ಪಟ್ಟಣದಲ್ಲಿ 17 ಜನರಿಗೆ ವೈರಸ್ ಇರುವುದು ದೃಢಪಟ್ಟಿದೆ. ಸೋಂಕಿತರ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ರಾಯಬಾಗ ತಾಲೂಕಿನ ಚಿಂಚಲಿ, ರಾಯಬಾಗ ಹಾಗೂ ಹಾರೂಗೇರಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆ ಪೈಕಿ ಚಿಂಚಲಿ ಪಟ್ಟಣದಲ್ಲಿ ತಮ್ಮನ್ನೂ ಕ್ವಾರಂಟೈನ್‌ಗೆ ಒಳಪಡಿಸಬಹುದೆಂದು ಹೆದರಿ ಕೆಲವರು ಮನೆ ಖಾಲಿ ಮಾಡಿದ್ದಾರೆ.

ಕುಡಚಿ ಪಟ್ಟಣದ 17 ರೋಗಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕುಡಚಿ ಪಟ್ಟಣದ ವಸತಿ ಶಾಲೆಯಲ್ಲಿ ಕ್ವಾರೆಂಟೈನ್‌ನಲ್ಲಿ ಇಡಲಾಗಿತ್ತು. ದ್ವಿತೀಯ ಸಂಪರ್ಕ ಹೊಂದಿದವರನ್ನು ತಾಲೂಕಿನ ವಿವಿಧ ವಸತಿ ಶಾಲೆಗಳಲ್ಲಿಡಿ ಎಂದು ಚಿಂಚಲಿ, ಹಾರೂಗೇರಿ ಪಟ್ಟಣದ ಜನರು ಮೊನ್ನೆ ಪ್ರತಿಭಟನೆ ನಡೆಸಿದ್ದರು. ಆದರೆ, ತಾಲೂಕು ಆಡಳಿತದವರು ರಾತ್ರೋರಾತ್ರಿ ಯಾರಿಗೂ ತಿಳಿಯದಂತೆ ಸೆಕೆಂಡರಿ ಸಂಪರ್ಕ ಹೊಂದಿದ್ದ 44 ಜನರನ್ನು ಚಿಂಚಲಿಯ ಮಾಯಕ್ಕಾ ಭಕ್ತ ನಿವಾಸದಲ್ಲಿ, 36 ಜನರನ್ನು ಹಾರೂಗೇರಿಯ 3 ಲಾಡ್ಜ್‌ಗಳಲ್ಲಿ, 14 ಜನರನ್ನು ರಾಯಬಾಗ ಪಟ್ಟಣದ ಲಾಡ್ಜ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಿದ್ದಾರೆ.

ಚಿಂಚಲಿ ಪಟ್ಟಣದ ಜನರು ಆತಂಕಗೊಂಡು ಗಂಟುಮೂಟೆ ಕಟ್ಟಿಕೊಂಡು ತಮ್ಮ ಮನೆ ಖಾಲಿ ಮಾಡಿ ಸಂಬಂಧಿಕರ, ತೋಟದ ಮನೆಗಳಿಗೆ ಹೊರಟಿದ್ದಾರೆ. ಚಿಂಚಲಿಯಲ್ಲಿ ಸುಮಾರು 20 ಕುಟುಂಬಗಳು ಮನೆಗಳನ್ನು ಈಗಾಗಲೇ ಖಾಲಿ ಮಾಡಿದ್ದು, ಹಾರೂಗೇರಿ ಮತ್ತು ರಾಯಬಾಗದ ಕೆಲ ಕುಟುಂಬಗಳವರು ಮನೆ ಖಾಲಿ ಮಾಡುವ ತಯಾರಿಯಲ್ಲಿದ್ದಾರೆ.